ಬೆಂಗಳೂರು : ರಾಜ್ಯ ಸರ್ಕಾರ ಬಾಡಿಗೆ ಮನೆಯಲ್ಲಿ ವಾಸಿಸುವ ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ನ್ಯೂಸ್ ನೀಡಿದೆ.
ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಮತ್ತಷ್ಟು ಜನಸ್ನೇಹಿ ಮಾಡ್ತಿದೆ. ಗ್ರಾಹಕರ ಅನುಕೂಲಕ್ಕಾಗಿ ನಿಯಮದಲ್ಲಿ ಕೆಲ ಬದಲಾವಣೆ ಮಾಡಿ ಗುಡ್ ನ್ಯೂಸ್ ನೀಡಿದೆ. ಬಾಡಿಗೆ ಮನೆಯಲ್ಲಿರುವ ಯೋಜನೆ ಫಲಾನುಭವಿಗಳಿಗೆ ಡಿ ಲಿಂಕ್ ಆಯ್ಕೆ ನೀಡಲಾಗಿದೆ. ಹೊಸ ಮನೆಗೆ ಹೊಸ ಅರ್ಜಿ ಹಾಕಲು ಅವಕಾಶ ನೀಡಿದೆ.
ಗೃಹಜ್ಯೋತಿ ಯೋಜನೆ ಫಲಾನುಭವಿಗಳು ಇನ್ನುಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ ಚಿಂತಿಸಬೇಕಿಲ್ಲ. ಮನೆ ಬದಲಾಯಿಸಿದವರು ಕೂಡಲೇ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ಹೊಸ ಮನೆಯ ವಿಳಾಸಕ್ಕೆ ಯೋಜನೆಯ ಫಲ ಪಡೆಯಬಹುದು. ಇದಕ್ಕಾಗಿ ಇಂಧನ ಇಲಾಖೆಯು ಡಿ ಲಿಂಕ್ ಆಯ್ಕೆ ನೀಡಿದೆ.
ಗೃಹಜ್ಯೋತಿ ಯೋಜನೆ ಜಾರಿ ನಂತರ ಕೆಲ ಸಮಸ್ಯೆಗಳು ಎದುರಾಗಿದ್ದವು. ಬಾಡಿಗೆ ಮನೆಯಲ್ಲಿದ್ದವರು ನಾನಾ ಕಾರಣಕ್ಕೆ ಮನೆ ಬದಲಾಯಿಸಿದ ಸಂದರ್ಭದಲ್ಲಿ ಹೊಸ ಮನೆಯ ಆರ್‌ಆರ್ ಸಂಖ್ಯೆಗೆ ತಮ್ಮ ಆಧಾರ್ ಜೋಡಣೆ ಮಾಡಿ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಜೊತೆಗೆ ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಆಗುತ್ತಿರಲಿಲ್ಲ.
ಮನೆ ಖಾಲಿ ಮಾಡುವಾಗ ಗೃಹಜ್ಯೋತಿ ರದ್ದು
ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹೊಸ ಬಾಡಿಗೆ ಮನೆಯ RR ಸಂಖ್ಯೆಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕವೇ ಮನೆಯನ್ನು ಖಾಲಿ ಮಾಡುವಾಗ ಗೃಹಜ್ಯೋತಿ ಯೋಜನೆ ರದ್ದು ಮಾಡಬಹುದಾಗಿದೆ.
ಇನ್ನೊಂದು ವಾರದಲ್ಲಿ ಈ ಆಯ್ಕೆಗೆ ಅವಕಾಶ
ಸದ್ಯ ಸೇವಾ ಸಿಂಧು ಪೋರ್ಟಲ್‌ನಲ್ಲಿ ಈ ಅವಕಾಶವಿಲ್ಲ. ಆದರೆ, ಇನ್ನೊಂದು ವಾರದಲ್ಲಿ ಈ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಕಚೇರಿ ಸಮಯದಲ್ಲಿ ಅಂದರೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ವೇಳೆಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಇದು ಗ್ರಾಹಕರ ಸಂತಸಕ್ಕೂ ಕಾರಣವಾಗಿದೆ.