ಶಿವಮೊಗ್ಗ : ಜನರ ದುಡ್ಡಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಲೋಕಸಭಾ ಚುನಾವಣೆಯ ಮೊದಲ ಪ್ರಚಾರವನ್ನು ಕಾಂಗ್ರೆಸ್ ಆರಂಭ ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯ ಕಾಂಗ್ರಸ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ದುಡ್ಡಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ ಎಂದು ತೋರಿಸಿದ್ದಾರೆ. ಏರ್ ಟಿಕೆಟ್, ಊಟ ತಿಂಡಿ, ರೂಮ್ ಬಾಡಿಗೆಗೆ ಜನರ ತೆರಿಗೆ ದುಡ್ಡು ಬಳಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಖಕ್ಕೆ ಹೊಡೆದಂತೆ ಕಾಂಗ್ರೆಸ್ಸಿಗರಿಗೆ ಉತ್ತರ ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ದೆಹಲಿಗೆ ಬಂದಾಗ ತುಂಬ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಅನುದಾನ ನಿಗದಿ ಮಾಡುವುದು ಕೇಂದ್ರ ಹಣಕಾಸು ಆಯೋಗ. ಇದರಲ್ಲಿ ನಮಗೆ ಅಧಿಕಾರ ಇಲ್ಲ ಎಂದು ಅವರು ತಿಳಿಸಿದ್ದರು. ಕಾಂಗ್ರೆಸ್‍ನ ನಿಯೋಗ ಹೋಗಿರುವುದು ಪ್ರಧಾನಿ ಮೋದಿ ಬಳಿಗಲ್ಲ, ಜಂತರ್ ಮಂತರ್‍ನಲ್ಲಿ ಪ್ರದರ್ಶನಕ್ಕೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಅಧಿಕಾರಕ್ಕಾಗಿ ದೇಶವನ್ನು ಛಿದ್ರ ಮಾಡಿದ್ರಿ
ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಅಂತ ವಿನಯ್ ಕುಲಕರ್ಣಿ ಮಂಡಿಸಿದ್ದಾರೆ. ಇದರ ಪೀಠಿಕೆಯನ್ನು ಡಿ.ಕೆ. ಸುರೇಶ್ ಹಾಕಿದ್ದರು. ನಾನು ಖರ್ಗೆ ಅವರನ್ನು ಪ್ರಶ್ನೆ ಮಾಡ್ತೇನೆ. ಅಧಿಕಾರಕೋಸ್ಕರ ದೇಶವನ್ನು ಛಿದ್ರ ಮಾಡಿದ್ರಿ. ಹಿಂದುಸ್ಥಾನ ಪಾಕಿಸ್ತಾನ ಅಂತ ಹೊಡೆದ್ರಿ. ರಾಜ್ಯಸಭೆಯಲ್ಲಿ ಮಾತನಾಡ್ತಾ ಅಖಂಡ ಭಾರತ ಹೊಡೆಯಲು ಬಿಡಲ್ಲ ಅಂದ್ರಿ. ನಿಮ್ಮ ಮಾತಿಗೆ ಸ್ವಲ್ಪವೂ ಕಿಮ್ಮತ್ತಿಲ್ಲ. ನೀವು ಹೇಳಿದರೂ ನಿಮ್ಮ ಆ ರಾಷ್ಟ್ರ ದ್ರೋಹಿಗಳು ಮಾತನಾಡ್ತಾರೆ. ಡಿ.ಕೆ. ಸುರೇಶ್, ವಿನಯ್ ಕುಲಕರ್ಣಿ ಅಮಾನತು ಮಾಡಿ. ಇಲ್ಲದಿದ್ದರೆ ಖರ್ಗೆಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದ್ದಾರೆ.