ಬೆಂಗಳೂರು: ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ವೀಣಾ ಸೆರಾವು ಅವರು ಸ್ಪರ್ಧೆ ಮಾಡುತ್ತಿದ್ದು, ಆಮ್ ಆದ್ಮಿ ಪಕ್ಷವು ಅವರಿಗೆ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್ ಹೇಳಿದರು.
ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣ ಅವರು ಬೆಂಗಳೂರು ನಗರ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು, ಆದರೆ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈಗ ಮತ್ತೆ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದು ವಿಪರ್ಯಾಸ ಎಂದರು.
ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ವೀಣಾ ಸೆರಾವು ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಆದರೆ ಇಂದು ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ಸಮಸ್ಯೆ ಇನ್ನೂ ದಾರುಣವಾಗಿದೆ. ಅತಿಥಿ ಶಿಕ್ಷಕರು ಇಂದು 10-15 ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುವಂತಾಗಿದೆ. ಈ ಹಣದಲ್ಲಿ ಸಂಸಾರ ಸಾಕುವುದು ಹೇಗೆ, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಚುನಾವಣೆ: ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟ!
ಸರ್ಕಾರಿ ಶಾಲೆಗಳ ಪರಿಸ್ಥಿತಿ ಕೆಟ್ಟದ್ದಾಗಿದೆ. ಶಿಕ್ಷಕರಿಗಾಗಲೀ, ವಿದ್ಯಾರ್ಥಿಗಳಿಗಾಗಲಿ ಅಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಹೊಸದಾಗಿ ಬಂದಿರುವ ಶಿಕ್ಷಕರಿಗೆ ಪದವೀಧರರ ಕ್ಷೇತ್ರದ ಚುನಾವಣೆ ಇರುವ ಬಗ್ಗೆಯೇ ಗೊತ್ತಿಲ್ಲ. ಚುನಾವಣಾ ಪ್ರಕ್ರಿಯೆ ಬಗ್ಗೆ ಗೊತ್ತಿಲ್ಲ. ಟೀಚರ್ ಕೌನ್ಸಿಲ್ ಇಷ್ಟು ವರ್ಷದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿಲ್ಲ ಎಂದರು.
ನಾನು ಹಲವು ಶಾಲೆಗಳಿಗೆ ಭೇಟಿ ನೀಡುತ್ತಿದ್ದು ಚುನಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಹಲವು ಶಾಲೆಗಳಲ್ಲಿ ಶಿಕ್ಷಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಶಿಕ್ಷಕರನ್ನು ನೋಡಿಕೊಳ್ಳುತ್ತಾರೆ, ಆದರೆ ಶಿಕ್ಷಕರನ್ನು ನೋಡಿಕೊಳ್ಳುವುದು ಯಾರು? ಶಿಕ್ಷಕರಿಗೆ ಬರುವ ಸಂಬಳದಲ್ಲಿ ಇಂದು ಜೀವನ ಮಾಡಕ್ಕೆ ಆಗುತ್ತದಾ ಎಂದು ಪ್ರಶ್ನೆ ಮಾಡಿದರು.
ಶಾಸಕರು, ಸಚಿವರು ಕೌಶಲ್ಯ ತರಬೇತಿ ಪಡೆಯುವ ಹೆಸರಿನಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ. ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ದೇಶಗಳಿಗೆ ನಮ್ಮ ಶಿಕ್ಷಕರನ್ನು ತರಬೇತಿಗೆ ಕಳುಹಿಸಲಿ, ಅಲ್ಲಿಂದ ತರಬೇತಿ ಪಡೆದು ಬಂದವರು, ನಮ್ಮ ಶಿಕ್ಷಕರಿಗೆ ತರಬೇತಿ ಕೊಟ್ಟು ಶಿಕ್ಷಣ ಗುಣಮಟ್ಟ ಸುಧಾರಣೆಯಾಗುತ್ತದೆ, ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಶಿಕ್ಷಕರ, ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧವಾಗಿದ್ದೇನೆ. ಮೊದಲ ಬಾರಿಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಈ ಬಾರಿ ಆರಿಸಿ ಬಂದರೆ, ಶಿಕ್ಷಕರು, ಶಾಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದರು.
ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಡಾ. ಸತೀಶ್ ಕುಮಾರ್, ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ಹಾಗೂ ಎಎಪಿ ಬೆಂಗಳೂರು ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.