Monday, December 23, 2024

ನಾಳೆ ಮುಖ್ಯಮಂತ್ರಿಯವರ ರಾಜ್ಯ ಮಟ್ಟದ ಜನತಾದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ!

ಬೆಂಗಳೂರು : ನಾಳೆ ವಿಧಾನಸೌಧದಲ್ಲಿ ನಡೆಯಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ನಡೆದಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು ಸಲ್ಲಿಸುವ ದೂರು ಹಾಗೂ ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಕೌಂಟರ್ ಗಳು, ಅಧಿಕಾರಿಗಳ ನಿಯೋಜನೆ ಹಾಗೂ ಎಸ್ ಒ.ಪಿ ಜಾರಿ ಮಾಡಿ ಆದೇಶಿಸಲಾಗಿದೆ.

ಇಲಾಖಾವಾರು ಕೌಂಟರ್ ಗಳು:
ಮುಖ್ಯಮಂತ್ರಿಯವರ ಜನತಾದರ್ಶನ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲಾ ಇಲಾಖೆಗಳ ಸ್ಟಾಲ್‌ ಗಳನ್ನು ಅಳವಡಿಸಲಾಗಿದ್ದು ಪ್ರತಿ ಸ್ಟಾಲ್ ಗಳಿಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾದರ್ಶನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಾಗರಿಕರನ್ನು ಪ್ರಥಮಹಂತದಲ್ಲಿ ವಿಚಾರಿಸಿ , ಯಾವ ಇಲಾಖೆಯ ಸ್ಟಾಲ್ ಗೆ ನಿರ್ದೇಶಿಸಿ ಕಳಿಸಬೇಕು ಎಂದು ವಿಂಗಡಿಸಲು ಅನುಭವಿ ಅಧಿಕಾರಿ – ಸಿಬ್ಬಂದಿಗಳ ವಿಚಾರಣಾ ಕೌಂಟರ್ (enquiry counter) ತೆರೆಯಲಾಗಿದೆ. ಆಲ್ಲಿ ನಾಗರಿಕರ ಮೊಬೈಲ್ ನಂಬರ್ & ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್ ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ, ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರು / ಸಣ್ಣ ಮಕ್ಕಳೊಂದಿಗೆ ಬಂದಂತಹ ನಾಗರಿಕರಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಮಾತುಗಳು ಕುಚೇಷ್ಟೆಯಿಂದ ಕೂಡಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!

ಇಲಾಖೆಯ ಕಾರ್ಯದರ್ಶಿಗಳು ತಮ್ಮ ಇಲಾಖೆಯ ಸಚಿವಾಲಯದ ಹಾಗೂ ಅಧೀನ ಇಲಾಖೆಯ ಮುಖ್ಯಸ್ಥರು, ಅಧಿಕಾರಿ, ಸಿಬ್ಬಂದಿಯವರ ತಂಡದೊಡನೆ ಸ್ಟಾಲ್ ನಲ್ಲಿದ್ದು, ಜನತಾದರ್ಶನಗಳಲ್ಲಿ ಬಂದ ಅರ್ಜಿಗಳನ್ನು ನಾಗರಿಕರಿಂದ ಸ್ವೀಕರಿಸಲಿದ್ದಾರೆ.

ಹಿರಿಯ ನಾಗರಿಕರು: ವಿಕಲಚೇತನರಿಗೆ ವ್ಹೀಲ್ ಚೇರ್ ವ್ಯವಸ್ಥೆ:

ವಯೋವೃದ್ಧರು / ಹಿರಿಯ ನಾಗರಿಕರು / ವಿಕಲಚೇತನರು / ಗರ್ಭಿಣಿಯರಿಗಾಗಿ Battery ಚಾಲಿತ buggy/Wheel Chairs ಗಳ ವ್ಯವಸ್ಥೆ ಕಲ್ಪಿಸಲಾಗಿದ್ದು ಸಂಬಂಧಿಸಿದ ಇಲಾಖೆಯ ಸ್ಟಾಲ್‌ ಗೆ ಅವರನ್ನು ಕರೆದೊಯ್ಯುವ ವ್ಯವಸ್ಥೆಯಾಗಿದೆ.

ಊಟದ ವ್ಯವಸ್ಥೆ:

ಜನತಾದರ್ಶನಕ್ಕೆ ಆಗಮಿಸುವ ನಾಗರಿಕರಿಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಐದರಿಂದ ಹತ್ತು ಸಾವಿರ ಜನರಿಗೆ ಆಹಾರ ಪೂರೈಸುವಂತಹ ವ್ಯವಸ್ಥೆಯಾಗಿದೆ.

ಶೌಚಾಲಯ ವ್ಯವಸ್ಥೆ:

ಜನತಾದರ್ಶನಕ್ಕೆ ಬರುವ ಎಲ್ಲಾ ಸಾರ್ವಜನಿಕರು ಹಾಗೂ ದಿವ್ಯಾಂಗರಿಗೆ ಸ್ವಚ್ಛ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಸಾರಿಗೆ ವ್ಯವಸ್ಥೆ:

ಜನಸ್ಪಂದನಾ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಬಿಎಂಟಿಸಿ ವತಿಯಿಂದ ಉಚಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

3738 ಅರ್ಜಿ ವಿಲೇವಾರಿ :

ನವೆಂಬರ್ 27 ರಂದು ನಡೆದ ಜನತಾ ದರ್ಶನದಲ್ಲಿ 4030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈವರೆಗೆ 3738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಒಟ್ಟಾರೆ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸುಗಮವಾಗಿ ಪರಿಹಾರವನ್ನು ಪಡೆಯಲು ಜನಸ್ಪಂದನ ಕಾರ್ಯಕ್ರಮ ನೆರವಾಗಲು ಭರದ ಸಿದ್ಧತೆ ನಡೆದಿದೆ.

RELATED ARTICLES

Related Articles

TRENDING ARTICLES