ಉಡುಪಿ : ಅಯೋಧ್ಯೆಯ ಶ್ರೀರಾಮ ಮಂದಿರದ ಆವರಣದಲ್ಲಿ ಪ್ರತಿದಿನ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆಯುತ್ತಿವೆ.
ಮಂಡಲ ಪೂಜೆಯ ಪ್ರಯುಕ್ತ ಉಡುಪಿ ಮತ್ತು ಕರಾವಳಿ ಭಾಗದಿಂದ ಮತ್ತು ದೇಶದ ನಾನಾ ಭಾಗಗಳಿಂದ ಬಂದಿರುವ ಋತ್ವಿಜರು ಹೋಮ ಹವನ ಕೈಗೊಂಡಿದ್ದಾರೆ.
ಕರಾವಳಿ ಜಿಲ್ಲೆಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದು, ಈ ಪೂಜೆಗಳಲ್ಲಿ ಪಾಲ್ಗೊಂಡಿದ್ದಾರೆ. ಸಮಾಜ ಸೇವೆಯ ದೃಷ್ಟಿಯಿಂದ ತಮ್ಮ ಊರುಗಳಲ್ಲಿ ವಸತಿ ಹೀನರಿಗೆ ಮನೆ ಕಟ್ಟಿಸಿ ಕೊಟ್ಟವರು, ಕಲಶವನ್ನು ಹರಕೆಯ ಸ್ವರೂಪದಲ್ಲಿ ಕೊಂಡೊಯ್ದು ರಾಮದೇವರಿಗೆ ಅರ್ಪಿಸುತ್ತಿದ್ದಾರೆ.
ಕರ್ನಾಟಕ, ಕೇರಳ ಕಲಾವಿದರಿಂದ ನಾದ ಸೇವೆ
ಈ ಮೂಲಕ ಪೇಜಾವರ ಶ್ರೀಗಳ ರಾಮರಾಜ್ಯದ ಕನಸಿನ ಮನೆ ಕಟ್ಟಿಸಿ ಕೊಡುವ ಯೋಜನೆಗೆ ಹೊಸ ಆಯಾಮ ನೀಡಿದ್ದಾರೆ. ಹೋಮ ಹವನ ನಡೆಯುವ ಸ್ಥಳದಲ್ಲಿ ಕರ್ನಾಟಕ ಮತ್ತು ಕೇರಳ ಭಾಗದಿಂದ ಬಂದ ಕಲಾವಿದರು ವಿವಿಧ ರೀತಿಯ ನಾದ ಸೇವೆಗಳನ್ನು ನಡೆಸಿಕೊಡುತ್ತಿದ್ದಾರೆ.
ಬಾಲರಾಮನಿಗೆ 16 ನಮೂನೆಗಳ ಪೂಜೆ
ಬಾಲರಾಮನಿಗೆ ಒಟ್ಟು 16 ನಮೂನೆಗಳ ಪೂಜೆ ನಡೆಯಬೇಕು. ಇದರಲ್ಲಿ ಗೌರವಾರ್ಥವಾಗಿ ಪೇಜಾವರ ಮಠದ ಶ್ರೀಗಳು, ಅಯೋಧ್ಯೆಯ ಬಾಲರಾಮನಿಗೆ ಚಾಮರಸೇವೆ ಸಲ್ಲಿಸಿದ್ದಾರೆ. 48 ದಿನಗಳ ಕಾಲ ಪೇಜಾವರ ಶ್ರೀಗಳೇ ಅಯೋಧ್ಯೆಯ ಬಾಲರಾಮನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಿದ್ದಾರೆ.