ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಾಳೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಎಲ್ಲ ಸಂಸದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ..?
ಮಾನ್ಯರೆ, ಒಂದು ವಿಶೇಷ ಸಂದರ್ಭದಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ.
ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರವು ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿರುತ್ತದೆ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು ಮತ್ತು ಸಂಸದರು ಸೇರಿ ದೆಹಲಿಯ ಜಂತರ್ ಮಂತರ್‌ನಲ್ಲಿ ಫೆಬ್ರವರಿ, 07 ರಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿದ್ದೇವೆ.
ಎಲ್ಲ 28 ಲೋಕಸಭಾ ಸದಸ್ಯರಿಗೆ ಪತ್ರ
ಪ್ರಹ್ಲಾದ್ ಜೋಶಿ, ಜಿಎಂ ಸಿದ್ದೇಶ್ವರ್, ಶಿವಕುಮಾರ್ ಉದಾಸಿ, ಅಣ್ಣಾ ಸಾಹೇಬ ಜೊಲ್ಲೆ, ರಮೇಶ್ ಜಿಗಜಿಣಗಿ, ಬಿ.ಎನ್. ಬಚ್ಚೇಗೌಡ, ನಳಿನ್ ಕುಮಾರ್ ಕಟೀಲ್, ಪ್ರಜ್ವಲ್ ರೇವಣ್ಣ, ಬಿ.ವೈ ರಾಘವೇಂದ್ರ, ಶ್ರೀನಿವಾಸ್ ಪ್ರಸಾದ್, ಡಾ. ಉಮೇಶ್ ಜಾಧವ್, ಎಸ್. ಮುನಿಸ್ವಾಮಿ, ಕರಡಿ ಸಂಗಣ್ಣ, ಸುಮಲತಾ ಅಂಬರೀಷ್, ಪ್ರತಾಪ್ ಸಿಂಹ, ರಾಜಾ ಅಮರೇಶ್ವರ್ ನಾಯಕ್, ಅನಂತ ಕುಮಾರ್ ಹೆಗಡೆ, ಜಿ.ಎಸ್. ಬಸವರಾಜ್, ಎ. ನಾರಾಯಣ ಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಡಿ.ಕೆ. ಸುರೇಶ್, ಡಿ.ವಿ ಸದಾನಂದ ಗೌಡ, ಪಿ.ಸಿ. ಮೋಹನ್, ಪಿ.ಸಿ. ಗದ್ದಿಗೌಡರ್, ತೇಜಸ್ವಿ ಸೂರ್ಯ, ಮಂಗಲಾ ಸುರೇಶ್ ಅಂಗಡಿ, ವೈ ದೇವೇಂದ್ರಪ್ಪ ಅವರಿಗೆ ಪತ್ರ ಬರೆಯಲಾಗಿದೆ.
ಪತ್ರ ಬರೆಯಲಾದ ರಾಜ್ಯಸಭಾ ಸದಸ್ಯರು
ಎಚ್.ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಡಾ. ವೀರೇಂದ್ರ ಹೆಗ್ಗಡೆ, ನಾಸಿರ್ ಹುಸೇನ್, ರಾಜೀವ್ ಚಂದ್ರಶೇಖರ್, ನಿರ್ಮಲಾ ಸೀತಾರಾಮನ್, ಎಲ್. ಹನುಮಂತಯ್ಯ, ಜಗ್ಗೇಶ್, ಜೈರಾಮ್ ರಮೇಶ್, ಈರಣ್ಣ ಕಡಾಡಿ, ಕೆ. ನಾರಾಯಣ್, ಲೆಹರ್ ಸಿಂಗ್, ಜಿ.ಸಿ. ಚಂದ್ರಶೇಖರ್.