Thursday, January 23, 2025

ಕಾಂಗ್ರೆಸ್ ಅಸಲಿ ಮುಖ ಕಳಚಿಡುತ್ತೇವೆ : ಬಿ.ವೈ. ವಿಜಯೇಂದ್ರ ಸವಾಲ್

ಬೆಂಗಳೂರು : ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಚಲೋ ದಿಲ್ಲಿ’ ಅಭಿಯಾನ ಆರಂಭಿಸಿದೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಅಸಲೀ ಮುಖವಾಡ ಕನ್ನಡಿಗರ ಮುಂದೆ ಕಳಚಿಡಲಿದ್ದೇವೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಸಾಧ್ಯವಾಗದೇ, ಆರ್ಥಿಕ ಸಮತೋಲನ ಕಾಯ್ದು ಕೊಳ್ಳುವಲ್ಲಿ ವಿಫಲವಾಗಿ ಬೊಕ್ಕಸ ಬರಿದು ಮಾಡಿಕೊಂಡಿದೆ. ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ತೆರಿಗೆ ಬಾಕಿಯ ನೆಪ ಮಾಡಿಕೊಂಡು ಕೇಂದ್ರ ಸರ್ಕಾದ ವಿರುದ್ಧ ಪ್ರತಿಭಟಿಸಲು ಹೊರಟಿದೆ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ ಬಂಡವಾಳ ಬಯಲಿಗೆಳೆಯುತ್ತೇವೆ

ಸುಳ್ಳು ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವುದೂ ಕೂಡ ವಂಚನೆಯ ಇನ್ನೊಂದು ಮುಖ.ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಸಾಕ್ಷಿ ಸಮೇತ ಬಯಲಿಗೆಳೆಯಲಿದೆ ಎಂದು ಹರಿಹಾಯ್ದಿದ್ದಾರೆ.

ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ

ಸುಮಾರು 60 ವರ್ಷಗಳ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್ ‘ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ’ ಎನ್ನುವಂತೆ ನಿರಂತರವಾಗಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಿದೆ. ರಾಜ್ಯಕ್ಕೆ ಬಹುದೊಡ್ಡ ಅನ್ಯಾಯಗಳನ್ನು ಎಸಗಿರುವುದಕ್ಕೆ ಇತಿಹಾಸದ ಪುಟಗಳಲ್ಲಿ ದಾಖಲೆ ಇದೆ. ಇದನ್ನೆಲ್ಲ ಇಷ್ಟರಲ್ಲೇ ಪುಂಖಾನುಪುಂಖವಾಗಿ ನಾವೂ ಬಿಚ್ಚಿಟ್ಟು ಕಾಂಗ್ರೆಸ್ ಅಸಲೀ ಮುಖ ಕಳಚುತ್ತೇವೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES