ದೇವನಹಳ್ಳಿ : ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ನಾನೇ ಎಂಬರ್ಥದ ಡಾ.ಕೆ. ಸುಧಾಕರ್ ಹೇಳಿಕೆಗೆ ಸ್ವಪಕ್ಷದ ಶಾಸಕ ಎಸ್.ಆರ್. ವಿಶ್ವನಾಥ್ ಟಾಂಗ್ ಕೊಟ್ಟಿದ್ದಾರೆ.
ದೇವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಆಶಿರ್ವಾದ ಅವರಿಗಿದ್ರೆ ಜೆಡಿಎಸ್ ಪಕ್ಷದಿಂದ ಸ್ಪರ್ದಿಸಬಹುದು ಎಂದು ಕುಟುಕಿದ್ದಾರೆ.
ನನ್ನ ಮಗ ಸಹ ಚಿಕ್ಕಬಳ್ಳಾಪುರ-ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ. ನಾವು ಸಹ ಬಿಜೆಪಿ ಪಕ್ಷದ ಹಿರಿಯರ ಬಳಿ ಒತ್ತಾಯ ಮಾಡಿ ನಮ್ಮ ಅಭಿಪ್ರಾಯ ತಿಳಿಸಿದ್ದೀವಿ. ಚಿಕ್ಕಬಳ್ಳಾಪುರದಲ್ಲಿ ಡಾ.ಕೆ. ಸುಧಾಕರ್ ಅವರು ಜೆಡಿಎಸ್ ನಾಯಕರು ನನಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದಿದ್ದಾರೆ. ಬಹುಶಃ ಡಾ.ಕೆ. ಸುಧಾಕರ್ ಜೆಡಿಎಸ್ ಅಭ್ಯರ್ಥಿ ಇರಬೇಕು ಎಂದು ಹೇಳಿದ್ದಾರೆ.
ಬಿಎಸ್ವೈ ಹೆಸರೇಳಬೇಕಿತ್ತು
ಬಿಜೆಪಿ ಪಕ್ಷದ ನಾಯಕರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರು ಅಭ್ಯರ್ಥಿ ಅಗ್ತಾರೆ. ಯಡಿಯೂರಪ್ಪ, ವಿಜಯೇಂದ್ರ, ಅಮಿತ್ ಶಾ, ಜೆ.ಪಿ. ನಡ್ಡಾ ಅವರ ಹೆಸರೇಳಬೇಕಿತ್ತು. ಜೆಡಿಎಸ್ ಆಕಾಂಕ್ಷಿ ಆಗಿರಬಹುದು ಎಂಬುದು ನನ್ನ ಭಾವನೆ. ಡಾ.ಕೆ. ಸುಧಾಕರ್ ರವರು ಜೆಡಿಎಸ್ನಿಂದ ನಿಂತರೆ ನಮ್ಮದೇನು ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಟಿಕೆಟ್ ನಮಗೆ ಕೊಡಿ
ಬಿಜೆಪಿಯಿಂದ ಟಿಕೆಟ್ ಕೊಡುವುದಾದರೆ ನಮಗೆ ಕೊಡಿ ಎಂದು ಒತ್ತಾಯ ಮಾಡ್ತೇವೆ. ನನ್ನ ಮಗ ಅಲೋಕ್ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಂತ ಹೇಳಿದ್ದೀವಿ ಬಿಟ್ರೆ, ಎಲ್ಲೂ ಅಭ್ಯರ್ಥಿ ಅಂತ ಹೇಳಿಲ್ಲ. ಡಾ.ಕೆ. ಸುಧಾಕರ್ ಏಕಪಕ್ಷೀಯ ನಿರ್ಧಾರ ಮಾಡಿದ್ರೆ ನಮ್ಮ ಅಭ್ಯಂತರವಿಲ್ಲ. ಅವರ ಹೇಳಿಕೆ ನೋಡಿದ್ರೆ ಡಾ.ಕೆ. ಸುಧಾಕರ್ ಜೆಡಿಎಸ್ ಅಭ್ಯರ್ಥಿ ಅಂತ ಕಾಣುತ್ತೆ ಎಂದು ಎಸ್.ಆರ್. ಶ್ರೀನಿವಾಸ್ ತಿರುಗೇಟು ಕೊಟ್ಟಿದ್ದಾರೆ.