Sunday, December 22, 2024

ಸಿದ್ದರಾಮಯ್ಯಗೆ ಜಾನುವಾರುಗಳ ಶಾಪ ತಟ್ಟುವುದು ಗ್ಯಾರಂಟಿ : ಬಿಜೆಪಿ

ಬೆಂಗಳೂರು : ರಾಜ್ಯ ಕಾಂಗ್ರೆಸ್​ ಸರ್ಕಾರ ಕೇವಲ ಜನತೆಗೆ ಮಾತ್ರವಲ್ಲ, ಜಾನುವಾರುಗಳಿಗೂ ಶಾಕ್‌ ನೀಡುವ ಸರ್ಕಾರ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಾಲು ಉತ್ಪಾದಕರಿಗೆ ಸಬ್ಸಿಡಿ ಹೆಚ್ಚಳ, ಹಸು-ಎಮ್ಮೆ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂಬಿತ್ಯಾದಿ ಕಲರ್‌ ಕಲರ್‌ ಹೂವುಗಳನ್ನು ಕಿವಿ ಮೇಲೆ ಇಟ್ಟು ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದೆ ಎಂದು ಟೀಕಿಸಿದೆ.

ಈಗ ಸಾಲವನ್ನು ನೀಡುತ್ತಿಲ್ಲ, ಸಬ್ಸಿಡಿಯನ್ನು ಹೆಚ್ಚಿಸದೆ, 716 ಕೋಟಿ ರೂ. ಸಬ್ಸಿಡಿ ಬಾಕಿ ಉಳಿಸಿಕೊಂಡಿದೆ. ಇದರ ಪರಿಣಾಮ ರಾಜ್ಯದಲ್ಲಿ ಹಾಲಿನ ಉತ್ಪಾದನೆ ದಯನೀಯವಾಗಿ ಕುಂಠಿತವಾಗಿದೆ. ಜನತೆಯ ಜೊತೆ ಜಾನುವಾರುಗಳ ಶಾಪವೂ ಸಹ ಸಿಎಂ ಸಿದ್ದರಾಮಯ್ಯ ನವರ ಸರ್ಕಾರಕ್ಕೆ ತಟ್ಟುವುದು ಖಚಿತ-ನಿಶ್ಚಿತ-ಖಂಡಿತ ಎಂದು ಛೇಡಿಸಿದೆ.

ಹಾಲು ಉತ್ಪಾದಕರಿಗೆ 7 ರೂ. ಸಬ್ಸಿಡಿ ಎಲ್ಲಿ?

ಸುಳ್ಳು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಸುಳ್ಳು. ಸಿಎಂ ಸಿದ್ದರಾಮಯ್ಯ ಅವರೇ, ನುಡಿದಂತೆ ನಡೆದ ಸರ್ಕಾರ ಮಣಗಟ್ಟಲೆ ಜಾಹೀರಾತು ನೀಡುವ ಮುನ್ನ ಹಾಲು ಉತ್ಪಾದಕರಿಗೆ 7 ರೂ. ಸಬ್ಸಿಡಿಯನ್ನು ಎಲ್ಲಿ? ಯಾವಾಗ? ನೀಡಲಾಗಿದೆ ಎಂಬುದನ್ನು ಜನತೆಗೆ ತಿಳಿಸಿ ಎಂದು ಕುಟುಕಿದೆ.

ಜನರ ಕಿವಿ ಮೇಲೆ ಬಣ್ಣ ಬಣ್ಣದ ಹೂ

ಅಧಿಕಾರಕ್ಕೇರಬೇಕು ಎನ್ನುವ ಏಕೈಕ ಕಾರಣಕ್ಕೆ, ಜನತೆಯ ಕಿವಿ ಮೇಲೆ ಬಣ್ಣ ಬಣ್ಣದ ಹೂವಿಟ್ಟು, ನಂದಿನಿ ವಿಚಾರದಲ್ಲಿ ಇಲ್ಲಸಲ್ಲದ ವಿವಾದ ಹುಟ್ಟಿಸಿದ್ದ ಕಾಂಗ್ರೆಸ್​ಗೆ ತಾವು ಯಾವ್ಯಾವ ಆಶ್ವಾಸನೆ ನೀಡಿದ್ದೆವು ಎಂಬುದೇ ಮರೆತಂತಿದೆ ಎಂದು ಚಾಟಿ ಬೀಸಿದೆ.

RELATED ARTICLES

Related Articles

TRENDING ARTICLES