Thursday, December 26, 2024

ಎಲ್.ಕೆ. ಅಡ್ವಾಣಿಯವರು ನಿಜವಾದ ಮಣ್ಣಿನ ಮಗ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಗೌರವ ಸಂದಿರುವುದು ಹೆಮ್ಮೆಯ ವಿಷಯವಾಗಿದ್ದು, ಅವರಿಗೆ ಅಭಿನಂದನೆ. ಎಲ್. ಕೆ. ಅಡ್ವಾಣಿ ಅವರು ನಿಜವಾದ ಭಾರತದ ಮಣ್ಣಿನ ಮಗನಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿಯವರಿಗೆ ಭಾರತ ರತ್ನ ಗೌರವ ಸಂದಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಅಡ್ವಾಣಿಯವರು ದೇಶ ವಿಭಜನೆಯ ಸಂದರ್ಭದಲ್ಲಿ ಭಾರತಕ್ಕೆ ಬಂದು ನೆಲೆಸಿದರು. ಅವರಿಗೆ ಭಾರತ ರತ್ನ ಗೌರವ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಿರಿಯ ರಾಜಕಾರಣಿ ಎಲ್​.ಕೆ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಸರ್ಕಾರ! 

ಅಡ್ವಾಣಿಯವರು ತಮ್ಮ ಸಾರ್ವಜನಿಕ ಜೀವನವನ್ನು ಜನಸಂಘದಿಂದ ಆರಂಭಿಸಿ, ಶ್ಯಾಮಪ್ರಸಾದ ಮುಖರ್ಜಿ ಅವರ ಜೊತೆಗೆ ಕಾಶ್ಮೀರ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ದೇಶಪ್ರೇಮವನ್ನು ಮೆರೆದರು. ರಾಮಜನ್ಮಭೂಮಿ ಹೋರಾಟದಲ್ಲಿ ಅಡ್ವಾಣಿಯವರು ಅತ್ಯಂತ ಪ್ರಮುಖ ಪಾತ್ರವಹಿಸಿ, ದೇಶವನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದರು. ಅವರ ಹೋರಾಟದ ಫಲವಾಗಿ ಕೋಟ್ಯಂತರ ಭಾರತೀಯರ ಕನಸಾಗಿದ್ದ ರಾಮಂದಿರ ಇಂದು ನನಸಾಗಿದೆ.

ಅಡ್ವಾಣಿಯವರು ಕೇಂದ್ರ ಗೃಹ ಸಚಿವರಾಗಿ ಭಾರತದ ಆಂತರಿಕ ಭದ್ರತೆಯನ್ನು ಬಲಗೊಳಿಸಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿದರು. ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಅವರು ದೇಶದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ.

ಅಡ್ವಾಣಿಯವರು ನಮ್ಮ ತಂದೆಗೆ ಅತ್ಯಂತ ಆತ್ಮೀಯರಾಗಿದ್ದರು. ಅಲ್ಲದೇ ಬೆಂಗಳೂರಿಗೆ ಬಂದಾಗ ನಮ್ಮ ಮನೆಗೆ ಬರುತ್ತಿದ್ದರು. ಅಂತಹ ಮಹಾನ್ ವ್ಯಕ್ತಿಗೆ ಭಾರತ ರತ್ನ ಗೌರವ ಸಂದಿರುವುದು ಹೆಮ್ಮೆಯಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES