Wednesday, January 22, 2025

ಪತ್ನಿಯ ಶೀಲ ಶಂಕಿಸಿ 12 ವರ್ಷದಿಂದ ಮನೆಯೊಳಗೆ ಕೂಡಿ ಹಾಕಿದ ಪಾಪಿ ಗಂಡ!

ಮೈಸೂರು: ಪಾಪಿ ಪತಿಯೊಬ್ಬ ತನ್ನ ಪತ್ನಿಯ ನಡತೆ ಶಂಕಿಸಿ 12 ವರ್ಷದಿಂದ ಗೃಹಬಂಧನದಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಎಚ್.ಡಿ.ಕೋಟೆ ತಾಲೂಕಿನ ಎಚ್.ಮಟಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಣ್ಣಾಲಯ್ಯ ಎಂಬಾತನಿಂದ ಈ ಕೃತ್ಯ ನಡೆದಿದೆ. ಈತ ಮನೆ ಬಾಗಿಲಿಗೆ ಮೂರು ಬೀಗ ಜಡಿದು ಪತ್ನಿಯನ್ನು ಬಂಧನದಲ್ಲಿ ಇರಿಸಿದ್ದ. ಮೂಲತಃ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಸುಮಾ ಬಂಧನಕ್ಕೆ ಒಳಗಾದ ಮಹಿಳೆಯಾಗಿದ್ದಾಳೆ.

12 ವರ್ಷದ ಹಿಂದೆ ಸಣ್ಣಾಲಯ್ಯನನ್ನು ವಿವಾಹವಾಗಿದ್ದ ಸುಮಾ ಈತನಿಗೆ 3ನೇ ಪತ್ನಿಯಾಗಿದ್ದು, ಸುಮಾಗೆ ಇಬ್ಬರು ಮಕ್ಕಳಿದ್ದಾರೆ. ಈ ಹಿಂದಿನ ಇಬ್ಬರು ಪತ್ನಿಯರು ಸಣ್ಣಾಲಯ್ಯನ ಕಾಟದಿಂದ ಬೇಸತ್ತು ಪತಿಯಿಂದ ದೂರಾಗಿದ್ದರು.

ಪತ್ನಿ ಬೇರೆ ಯಾರ ಜತೆಗೂ ಮಾತನಾಡದಂತೆ ಜಾಗರೂಕತೆ ವಹಿಸುತ್ತಿದ್ದ ಸಣ್ಣಾಲಯ್ಯ ಮನೆಯ ಕಿಟಕಿಗಳನ್ನೂ ಮುಚ್ಚಿ ಭದ್ರಪಡಿಸಿದ್ದ. ಕೋಣೆಯ ಒಳಗೆ ಶೌಚಾಲಯ ಇಲ್ಲದ ಕಾರಣ ಬಕೆಟ್ ಇರಿಸಿ ರಾತ್ರಿ ವೇಳೆ ಮಲ, ಮೂತ್ರ ಹೊರಗೆ ಸಾಗಿಸುತ್ತಿದ್ದ. ಇದರ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಈ ಬಗ್ಗೆ ಹಲವಾರು ಬಾರಿ ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆದಿದ್ದರೂ ತಪ್ಪು ತಿದ್ದಿಕೊಳ್ಳದೇ ತನ್ನ ಚಾಳಿಯನ್ನು ಸಣ್ಣಾಲಯ್ಯ ಮುಂದುವರಿಸಿದ್ದ. ವಿಷಯ ತಿಳಿದು ವಕೀಲ ಸಿದ್ದಪ್ಪಾಜಿ ಸಾಂತ್ವನ ಕೇಂದ್ರದ ಜಶೀಲ ಎಎಸ್‌ಐ ಸುಭಾನ್ ಮತ್ತಿತರರ ತಂಡ ಸುಮಾ ಮನೆಗೆ ಭೇಟಿ ನೀಡಿದ್ದು, ಮನೆಯ ಬೀಗ ಮತ್ತು ಬಾಗಿಲು ಮುರಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.

ರಾತ್ರೋರಾತ್ರಿ ಸುಮಾ ಮತ್ತು ಮಕ್ಕಳ ರಕ್ಷಣೆ ಮಾಡಿ ಮಹಿಳೆ ಒಪ್ಪಿಗೆಯಂತೆ ಆಕೆಯ ತವರು ಮನೆಯಲ್ಲಿ ಆಶ್ರಯ ಕೊಡಿಸಲಾಗಿದೆ. ಪತಿ ಸಣ್ಣಾಲಯ್ಯ ತಲೆ ತಪ್ಪಿಸಿಕೊಂಡಿದ್ದಾನೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES