ನವದೆಹಲಿ : ದೇಶ ವಿಭಜನೆ ಹೇಳಿಕೆ ಬಳಿಕ ಮೊದಲ ಬಾರಿಗೆ ಪವರ್ ಟಿವಿಗೆ ಪ್ರತಿಕ್ರಿಯಿಸಿದ ಸಂಸದ ಡಿ.ಕೆ. ಸುರೇಶ್ ಅವರು, ಕನ್ನಡಿಗರ ವಿರುದ್ಧದ ಧೋರಣೆ ಖಂಡಿಸಿದ್ರೆ ದೇಶ ವಿರೋಧಿನಾ..? ಎಂದು ಪ್ರಶ್ನಿಸಿದರು.
ನವದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮದು ಸ್ವಾತಂತ್ರ್ಯ ಹೋರಾಟದ ಪಕ್ಷ. ನಾನು ಭಾರತೀಯ, ನಾನು ಹಿಂದೂ, ನಾನೊಬ್ಬ ಕನ್ನಡಿಗ. ನಾನು ಕನ್ನಡಿಗರ ಬಗ್ಗೆಯೇ ಮಾತನಾಡಬಾರದಾ..? ಎಂದು ಗುಡುಗಿದರು.
ಕರ್ನಾಟಕಕ್ಕೆ ಆದ ಅನ್ಯಾಯ ಪಶ್ನಿಸುವ ಹಕ್ಕು ನನಗೆ ಇದೆ. ನೆಲ, ಜಲ ಭಾಷೆ ಬಗ್ಗೆ ಧ್ವನಿ ಎತ್ತಿದ್ದೇನೆ. ಕರ್ನಾಟಕ ಕೇಂದ್ರಕ್ಕೆ ಕೊಡುವುದು ಸಿಂಹಪಾಲು, ನಮ್ಮ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಅವರಿಗೆ ಬೇಕಾದ ರಾಜ್ಯಗಳಿಗೆ ಹೆಚ್ಚು ಹಣ ನೀಡ್ತಿದ್ದಾರೆ. ಜನರ ಭಾವನೆ ಏನು ಅನ್ನೋದನ್ನು ನಾನು ಹೇಳಿದ್ದೇನೆ ಎಂದು ಹೇಳಿದರು.
ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ
ಕೇಂದ್ರ ಸರಕಾರ ಕರ್ನಾಟಕಕ್ಕೆ ಏನು ಕೊಟ್ಟಿದೆ ಎಂದು ಹೇಳಲಿ. ಕನ್ನಡಿಗರ ವಿರುದ್ಧದ ಧೋರಣೆ ಖಂಡಿಸಿದ್ರೆ ನಾನು ದೇಶವಿರೋಧಿಯೇ..? ದೇಶಭಕ್ತಿಯನ್ನು ಬಿಜೆಪಿಯಿಂದ ಕಲಿಯಬೇಕಿಲ್ಲ. ನಾನು ಕನ್ನಡಿಗ, ನಾನು ಕರ್ನಾಟಕದವ, ನಾನು ಭಾರತೀಯ. ದಕ್ಷಿಣ ರಾಜ್ಯಗಳು ಅದರಲ್ಲಿಯೂ ವಿಶೇಷವಾಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ನನ್ನ ಧರ್ಮ ಎಂದು ಪವರ್ ಟಿವಿಗೆ ಸಂಸದ ಡಿ.ಕೆ. ಸುರೇಶ್ ಸ್ಪಷ್ಟನೆ ನೀಡಿದರು.