ಬೆಂಗಳೂರು : ಸಂಸದ ಡಿ.ಕೆ ಸುರೇಶ್ ಅವರಿಗೆ ತಿಳುವಳಿಕೆಯ ಕೊರತೆ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ತೆರಿಗೆ ಸಂಗ್ರಹ ಮಾಡ್ತೇವೆ ಅಂತ ಅದೆಲ್ಲ ನಮಗೇ ಸೇರಬೇಕು ಅಂತಲ್ಲ. ಆರ್ಥಿಕ ವಿಕೇಂದ್ರೀಕರಣ ಬಗ್ಗೆ ಸುರೇಶ್ ತಿಳಿದುಕೊಳ್ಳಲಿ. ಜವಾಬ್ದಾರಿ ಸ್ಥಾನದಲ್ಲಿ ಇರೋರು ವಿಚಾರಗಳು ಸರಿಯಾಗಿ ಮಂಡಿಸಬೇಕು. ಜನರನ್ನು ದಾರಿ ತಪ್ಪಿಸುವ ಹೇಳಿಕೆ ಇದು ಎಂದು ಕಿಡಿಕಾರಿದರು.
ಇವರ ಅಣ್ಣನೇ ಬೆಂಗಳೂರು ಅಭಿವೃದ್ಧಿ, ಬೆಂಗಳೂರು ಉಸ್ತುವಾರಿ ಮಂತ್ರಿ. ಇವರು ಬೆಂಗಳೂರಿಗೆ ಏನು ಕೊಟ್ಟಿದ್ದಾರೆ ಹೇಳಲಿ. ಬೆಂಗಳೂರು ರಾಜ್ಯದ ಆರ್ಥಿಕತೆ ಸಾಕಷ್ಟು ಕೊಡುಗೆ ಕೊಡುತ್ತಿದೆ. ಇವರ ಸರ್ಕಾರ ಬೆಂಗಳೂರಿಗೆ ಎಷ್ಟು ಕೊಟ್ಟಿದಾರೆ ಹೇಳಲಿ. ರಾಮನಗರಕ್ಕೆ ಹೆಚ್ಚಿನ ಹಣ ತಗೊಂಡು ಹೋಗಿದಾರೆ. ರಾಜಕೀಯ ಪ್ರೇರಿತ ಹೇಳಿಕೆ ಕೊಡಬಾರದು ಎಂದು ವಾಗ್ದಾಳಿ ನಡೆಸಿದರು.
ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್
ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು, ಇದು ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್. ಮೂಲಸೌಕರ್ಯಕ್ಕೆ ಅತಿ ಹೆಚ್ಚಿನ ಒತ್ತು ಕೊಡಲಾಗಿದೆ. ಯುವಕರಿಗೆ, ಮಹಿಳೆಯರಿಗೆ, ರೈತರಿಗೆ ಆದ್ಯತೆ ನೀಡಲಾಗಿದೆ. ಭರವಸೆದಾಯಕ ಬಜೆಟ್ ಇದಾಗಿದೆ ಎಂದು ಅಶ್ವತ್ಥ ನಾರಾಯಣ್ ಬಣ್ಣಿಸಿದರು.