ಮೈಸೂರು : ಸ್ನೇಹಿತರಿಗೆ, ಪರಿಚಯಸ್ಥರಿಗೆ ಸಾಲ ಕೊಡುವ ಹಾಗೂ ಕೊಡಿಸುವ ಮುನ್ನ ಹುಷಾರ್..! ಸಾಲ ಕೊಡುವಾಗ ಯಾವ ದಾಖಲೆಯನ್ನೂ ಮೆಂಟೇನ್ ಮಾಡುವುದಿಲ್ಲವಾದ್ರಿಂದ ಸಾಲ ಪಡೆದವರು ಸತಾಯಿಸಬಹುದು. ಹೀಗೆ ಸಾಲ ಕೊಡಿಸಿದ ತಪ್ಪಿಗೆ ದಂಪತಿಗಳು ಮಸಣ ಸೇರಿದ್ದಾರೆ.
ಮೈಸೂರಿನಲ್ಲಿ ಈ ಘಟನೆ ನಡೆದಿದೆ. ತರಕಾರಿ ವ್ಯಾಪಾರಿ ತನ್ನ ಸ್ನೇಹಿತನಿಗೆ ಸಾಲ ಕೊಡಿಸಿ ಸಾವಿನ ಮನೆಯನ್ನೇ ಸೇರಿದ್ದಾನೆ. ಯರಗನಹಳ್ಳಿ ನಿವಾಸಿ ವಿಶ್ವ(34) ಹಾಗೂ ಸುಷ್ಮಾ(28) ಆತ್ಮಹತ್ಯೆಗೆ ಶರಣಾದ ದಂಪತಿ.
ಮೃತ ವಿಶ್ವ ಹಲವು ವರ್ಷಗಳಿಂದ ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಈತ ಯಾರೇ ಕಷ್ಟದಲ್ಲಿದ್ದರೂ ಅವರ ಸಹಾಯಕ್ಕೆ ಧಾವಿಸುತ್ತಿದ್ದರು. ಹೀಗೆ ತನಗೆ ಕಷ್ಟ ಅಂತ ಸ್ನೇಹಿತನೇ ಕೇಳಿದಾಗ ತನ್ನ ಬಳಿ ಇದ್ದ ಒಡವೆಗಳನ್ನ ಕೊಟ್ಟು ಸಹಾಯ ಮಾಡಿದ್ದಾನೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್
ಇನ್ನು ಇಷ್ಟೆಲ್ಲ ಸಹಾಯ ಮಾಡಿದ ಈತನಿಗೆ ಸ್ನೇಹಿತರೇ ಪಂಗನಾಮ ಹಾಕಿದ್ದಾರೆ. ಈ ಹಿನ್ನೆಲೆ ಮನನೊಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಪತ್ನಿ ಜೊತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾನೆ.
ಹಣ ಪಡೆದು ಕೈಕೊಟ್ಟ ಸ್ನೇಹಿತರು
ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಮಾಡ್ತಿದ್ದ ಶಿವು ಎಂಬಾತನಿಗೆ ಹಣ ನೀಡಿದ್ದನಂತೆ. ಜೊತೆಗೆ ರಾಜಣ್ಣ ಎಂಬುವವರಿಗೆ ಚಿನ್ನದ ಒಡವೇ ನೀಡಿದ್ದನಂತೆ. ಆದರೆ, ಇಬ್ಬರೂ ವಾಪಸ್ ನೀಡಿಲ್ಲ. ಈ ಹಿನ್ನೆಲೆ ಮೈಸೂರಿನ ರಿಂಗ್ ರೋಡ್ನಲ್ಲಿರೋ ಲಾಡ್ಜ್ನಲ್ಲಿ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.
ಸದ್ಯ ಶಿವು ಹಾಗೂ ರಾಜಣ್ಣನಿಗಾಗಿ ಆಲನಹಳ್ಳಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಎಲ್ಲರ ಒಳಿತನ್ನೇ ಬಯಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಿದ್ದ ವ್ಯಕ್ತಿ ಬಾಳು ಅಂತ್ಯವಾಗಿತ್ತು ಮಾತ್ರ ದುರಂತ.