Thursday, November 21, 2024

81 ರನ್​ಗೆ ಕಿವೀಸ್ ಆಲೌಟ್.. ಭಾರತಕ್ಕೆ 214 ರನ್​ಗಳ ಬೃಹತ್ ಗೆಲುವು

ಬೆಂಗಳೂರು : ಅಂಡರ್​-19 ವಿಶ್ವಕಪ್​ನ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಭಾರತ ಯಂಗ್ ಟೈಗರ್ಸ್ ಕಿವೀಸ್​ ಪಡೆಯ ಕಿವಿ ಹಿಂಡಿದ್ದಾರೆ.

ದಕ್ಷಿಣ ಆಫ್ರಿಕಾದ ಮ್ಯಾಂಗೌಂಗ್ ಓವಲ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 214 ರನ್​ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 4 ಪಂದ್ಯಗಳನ್ನು ಗೆಲ್ಲುವ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

ಭಾರತ ನೀಡಿದ್ದ 296 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್, 28.1 ಓವರ್​ಗಳಲ್ಲಿ ಕೇವಲ 81 ರನ್​ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು. ಭಾರತ ಈ ಪಂದ್ಯವನ್ನು 214 ರನ್‌ಗಳಿಂದ ಗೆದ್ದು ಬೀಗಿತು. ಕಿವೀಸ್ ಪರ ಜಾಕ್ಸನ್ 19, ಕಮ್ಮಿಂಗ್ 16, ಥಾಂಪ್ಸನ್ 12, ನೆಲ್ಸನ್ 10 ರನ್​ ಗಳಿಸಿದರು. ಉಳಿದಂತೆ ಯಾವ ಬ್ಯಾಟರ್ ಸಹ ಎರಡಂಕಿ ದಾಟಲಿಲ್ಲ. ಮೂವರು ಶೂನ್ಯಕ್ಕೆ ನಿರ್ಗಮಿಸಿದರು.

ಭಾರತದ ಬೌಲಿಂಗ್ ದಾಳಿಗೆ ಕಿವೀಸ್​ ಪಡೆ ಅಕ್ಷರಶಃ ನಲುಗಿತು. ಭಾರತದ ಪರ ಸೌಮ್ಯ ಪಾಂಡೆ ಅತಿ ಹೆಚ್ಚು ವಿಕೆಟ್ ಕಬಳಿಸಿದರು. 10 ಓವರ್‌ ಬೌಲ್​ ಮಾಡಿದ ಸೌಮ್ಯ ಪಾಂಡೆ ಕೇವಲ 19 ರನ್ ನೀಡಿ 4 ವಿಕೆಟ್ ಪಡೆದರು. ರಾಜ್​ ಲಿಂಬಾನಿ ಹಾಗೂ ಮುಶೀರ್ ತಲಾ 2, ನಮನ್ ಹಾಗೂ ಅರ್ಶಿನ್ ತಲಾ 1 ವಿಕೆಟ್ ಪಡೆದರು.

ಬ್ಯಾಟಿಂಗ್, ಬೌಲಿಂಗ್​ನಲ್ಲಿ ಮುಶೀರ್ ಮಿಂಚು

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ದೊಡ್ಡ ಮೊತ್ತ ಕಲೆ ಹಾಕಿತು. ಮುಶೀರ್ ಖಾನ್ ಟೂರ್ನಿಯಲ್ಲಿ ಸತತ ಎರಡನೇ ಶತಕ (131) ಸಿಡಿಸಿ ಮಿಂಚಿದರು. ಆದರ್ಶ್ ಸಿಂಗ್ 52 ರನ್‌ ಗಳಿಸಿದರು. ಭಾರತ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 295 ರನ್ ಗಳಿಸಿತು. ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಮುಶೀರ್ ಬೌಲಿಂಗ್​ನಲ್ಲೂ ಮಿಂಚಿ, 2 ವಿಕೆಟ್ ಪಡೆದರು. ಆ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

RELATED ARTICLES

Related Articles

TRENDING ARTICLES