Wednesday, January 22, 2025

ಕಾಲೇಜಿಗೆ ಹೋಗು ಎಂದಿದ್ದಕ್ಕೆ ಬಾವಿಗೆ ಹಾರಿದ ತಂಗಿ, ರಕ್ಷಿಸಲು ಹೋದ ಅಣ್ಣನೂ ಸಾವು

ಕಲಬುರಗಿ : ಆ ಯುವಕ ತನ್ನ ತಂಗಿಯನ್ನು ತುಂಬಾನೇ ಪ್ರೀತಿ ಮಾಡ್ತಿದ್ದ. ತನ್ನ ತಂಗಿ ಓದಿ ಒಳ್ಳೆಯ ಜೀವನ ರೂಪಿಸಿಕೊಳ್ಬೇಕು ಎಂದು ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ, ಸಹೋದರಿ ಯಾವಾಗಲು ಕಾಲೇಜಿಗೆ ಬಂಕ್​ ಹಾಕ್ತಿದ್ಲು. ಸಿಟ್ಟಿಗೆದ್ದ ಅಣ್ಣ ಕಾಲೇಜಿಗೆ ಹೋಗು ಎಂದಿದ್ದಾನೆ ಇಷ್ಟೇ. ಇಷ್ಟಕ್ಕೆ ದುಡುಕಿದ ತಂಗಿ ಮಸಣ ಸೇರಿದ್ದಾಳೆ.

ಕಾಲೇಜಿಗೆ ಹೋಗು ಎಂದಿದ್ದಕ್ಕೆ ತಂಗಿ ಬಾವಿಗೆ ಹಾರಿದ್ದಾಳೆ. ಸಹೋದರಿಯನ್ನು ರಕ್ಷಿಸಲು ಅಣ್ಣ ಸಹ ಬಾವಿಗೆ ಜಿಗಿದಿದ್ದಾನೆ. ಈಜು ಬಾರದೆ ಇಬ್ಬರೂ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದೆ.

ಸಂದೀಪ್ (21) ಮತ್ತು ನಂದಿನಿ (18) ಮೃತ ಅಣ್ಣ-ತಂಗಿ. ಇವರು ಚಂದಾಪುರದಲ್ಲಿ ಒಂದೇ ಕಾಲೇಜಿನಲ್ಲಿ ಪದವಿ ಮತ್ತು ಪಿಯು ವ್ಯಾಸಂಗ ಮಾಡ್ತಿದ್ರು. ಇದರ ಮಧ್ಯೆ ಕಾಲೇಜಿಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ತಂಗಿ ನಂದಿನಿಗೆ ಅಣ್ಣ ಸಂದೀಪ್ ಪದೇಪದೆ ಬುದ್ದಿವಾದ ಹೇಳ್ತಿದ್ದ. ಕಳೆದ 28ನೇ ತಾರೀಖಿನಂದು ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಬೇಸತ್ತ ನಂದಿನಿ ಗ್ರಾಮದ ಬಾವಿಗೆ ಹಾರಿಯೇ ಬಿಟ್ಟಿದ್ಲು. ಆ ವೇಳೆ ಸಹೋದರಿಯನ್ನ ರಕ್ಷಿಸಲು ಅಂತ ಅಣ್ಣನು ಸಹ ಬಾವಿಗೆ ಹಾರಿದ್ದಾನೆ. ಆದರೆ, ಇಬ್ಬರಿಗೂ ಈಜು ಬಾರದೇ ಇಬ್ಬರೂ ಮೃತಪಟ್ಟಿದ್ದಾರೆ.

ಒಂದೇ ಗುಂಡಿಯಲ್ಲಿ ಇಬ್ಬರ ಸಂಸ್ಕಾರ

ಇನ್ನು ಅಣ್ಣ-ತಂಗಿ ಇಬ್ಬರು ಕಾಣೆಯಾಗಿದ್ದಾರೆಂದು ಕುಟುಂಬಸ್ಥರು ಹುಡಕಾಟ ನಡೆಸುವಾಗ ಬಾವಿಯಲ್ಲಿ ಮೃತದೇಹಗಳು ಕಾಣಿಸಿವೆ. ಮಕ್ಕಳ ಶವ ಕಂಡು ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತ್ತು.. ಇನ್ನು ಮೃತದೇಹಗಳನ್ನು ಹೊರತೆಗೆದು ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಂತರ ಒಂದೇ ಗುಂಡಿಯಲ್ಲಿ ಇಬ್ಬರ ಅಂತ್ಯ ಸಂಸ್ಕಾರ ನೆರವೇರಿದೆ.

ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ UDR ಪ್ರಕರಣ ದಾಖಲಾಗಿದೆ. ಅದೇನೆ ಇರಲಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ತಂಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ್ರೆ, ತಂಗಿಯನ್ನ ರಕ್ಷಿಸಲು ಹೋಗಿ ಅಣ್ಣ ಸಹ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.

RELATED ARTICLES

Related Articles

TRENDING ARTICLES