ಬೆಂಗಳೂರು: ಮೋದಿಯನ್ನು ಪ್ರಶ್ನಿಸುವಂತಹ ಧೈರ್ಯ ಬಿಜೆಪಿಯವರಿಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ರಾಜ್ಯದ ರೈತರಿಗೆ ಪರಿಹಾರದ ಹಣ ನೀಡದೆ ಐದು ತಿಂಗಳಿನಿಂದ ಗೋಳಾಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲಾಗದ ಪುಕ್ಕಲು ಬಿಜೆಪಿ ನಾಯಕರು, ನಮ್ಮ ವಿರುದ್ಧ ‘ಪರಿಹಾರ ಕೊಡಿ ಅಥವಾ ಕುರ್ಚಿ ಬಿಡಿ’ ಎಂಬ ನಾಟಕ ಪ್ರದರ್ಶನಕ್ಕೆ ಹೊರಟಿರುವುದು ಹಾಸ್ಯಾಸ್ಪದ. ಅಷ್ಟೇ ಅಲ್ಲ, ರೈತರಿಗೆ ಬಗೆಯುತ್ತಿರುವ ದ್ರೋಹ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಇದನ್ನೂ ಓದಿ: ಮೋದಿಯನ್ನು ಪ್ರಶ್ನಿಸುವಂತಹ ಧೈರ್ಯ ಬಿಜೆಪಿಯವರಿಗಿಲ್ಲ
‘ರೈತರಿಗೆ ಪರಿಹಾರ ಕೊಡಿ, ಇಲ್ಲವೇ ಕುರ್ಚಿ ಬಿಡಿ’ ಎಂಬ ಘೋಷಣೆಯೊಂದಿಗೆ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆ ಬಗ್ಗೆ ಟೀಕಿಸಿರುವ ಮುಖ್ಯಮಂತ್ರಿ, ‘ರಾಜ್ಯದ ಬಿಜೆಪಿ ನಾಯಕರಿಗೆ ಕರ್ನಾಟಕದ ನೆಲದ ಮಣ್ಣು ಮತ್ತು ನೀರಿನ ಋಣ ಇದ್ದರೆ ದೆಹಲಿಗೆ ಹೋಗಿ ಕನ್ನಡಿಗರ ಬಗ್ಗೆ ಯಾಕಿಷ್ಟು ನಿಮಗೆ ದ್ವೇಷ? ಎಂದು ಪ್ರಧಾನಿಯನ್ನು ಕೇಳಬೇಕು.
ಪರಿಹಾರಕ್ಕಾಗಿ ಒತ್ತಾಯಿಸಿ ಪ್ರಧಾನಿ ಕಾರ್ಯಾಲಯದ ಎದುರು ಧರಣಿ ಕುಳಿತುಕೊಳ್ಳಬೇಕು. ಬಿಜೆಪಿಯವರ ಆಟಾಟೋಪಗಳೇನಿದ್ದರೂ ರಾಜ್ಯದಲ್ಲಿ ಮಾತ್ರ. ಇಲ್ಲಿ ಎಲ್ಲರೂ ಹುಲಿ-ಸಿಂಹಗಳೇ. ಪ್ರಧಾನಮಂತ್ರಿ, ಗೃಹ ಸಚಿವರನ್ನು ಕಂಡ ತಕ್ಷಣ ಬಾಲ ಮುದುರಿದ ಇಲಿಗಳಾಗುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.