ಬೆಂಗಳೂರು : ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾದರೆ ದೇಶದಲ್ಲಿ ಚುನಾವಣಾ ವ್ಯವಸ್ಥೆಯೇ ಇರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಭುವನೇಶ್ವರದಲ್ಲಿ ನಡೆದ ‘ಒಡಿಶಾ ಬಚಾವೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವನ್ನು ಉಳಿಸಲು 2024ರ ಲೋಕಸಭೆ ಚುನಾವಣೆಯೇ ಜನರಿಗೆ ಇರುವ ಕೊನೆಯ ಅವಕಾಶ ಎಂದು ಎಚ್ಚರಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೆ ಗೆದ್ದು ಪ್ರಧಾನಿಯಾದ್ರೆ, ದೇಶದಲ್ಲಿ ಸರ್ವಾಧಿಕಾರ ಜಾರಿಗೆ ಬರುತ್ತೆ. ಮುಂದೊಂದು ದಿನ ಭಾರತದಲ್ಲಿ ಚುನಾವಣೆಯೇ ನಡೆಯುವುದಿಲ್ಲ. ಬಿಜೆಪಿ ಮತ್ತು ಅದರ ಸಿದ್ಧಾಂತ ವಾದಿಯಾಗಿರುವ RSSನಿಂದ ದೂರವಿರಿ, ಅದು ವಿಷವಿದ್ದಂತೆ ಎಂದು ಕಿಡಿಕಾರಿದ್ದಾರೆ.
ಮೋದಿ ಸರ್ವಾಧಿಕಾರ ಸ್ಥಾಪಿಸಲಿದ್ದಾರೆ
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಲಕ್ಷಾಂತರ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಸರ್ವಾಧಿಕಾರವನ್ನು ಸ್ಥಾಪಿಸಲಿದ್ದಾರೆ ಎಂದು ಗುಡುಗಿದ್ದಾರೆ.
ನಾವು ಬಿಜೆಪಿಯನ್ನು ಸೋಲಿಸುತ್ತೇವೆ
ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಎನ್‌ಡಿಎಗೆ ಮರಳಿದ್ದಾರೆ. ಇದರಿಂದ I.N.D.I.A ಒಕ್ಕೂಟಕ್ಕೆ ಹಾಗೂ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಹಾಘಟಬಂಧನ್ ನಿಂದ ಒಬ್ಬ ವ್ಯಕ್ತಿ ಹೋದರೆ ಏನೂ ವ್ಯತ್ಯಾಸವಾಗುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.