ತುಮಕೂರು: ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಸರಿ ಧ್ವಜ ಹಾರಿಸಲು ಅನುಮತಿ ನೀಡಿರಲಿಲ್ಲ. ಹಾಗಾಗಿ ಪಂಚಾಯಿತಿ ಅಧಿಕಾರಿಗಳು ಕೇಸರಿ ಧ್ವಜ ತೆಗೆದು, ರಾಷ್ಟ್ರಧ್ವಜ ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು. ಇದರಿಂದ ಗಲಾಟೆಯಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ
ಬೇರೆ ಬೇರೆ ಕಡೆಯಲ್ಲಿ ಕೇಸರಿ ಧ್ವಜ ಹಾರಿಸಲು ಯಾರದ್ದು ತಕರಾರು ಇಲ್ಲ. ಆದರೆ ಸರ್ಕಾರಿ ಜಾಗದಲ್ಲಿ ಹಾರಿಸಬಾರದು.ಇದು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಕಾಂಗ್ರೆಸ್‌ನವರು ಹಿಂದೂ ವಿರೋಧಿಗಳು ಎಂದು ಬಿಂಬಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ನಾವು ಸಹ ಹಿಂದೂಗಳೇ, ನೀವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ ಎಂದು ಹೇಳುತ್ತಿದ್ದೇವೆ. ರಾಜ್ಯದ ಕಾನೂನು ಮುರಿಯುವ ಕೆಲಸ ಮಾಡಬೇಡಿ ಅಂತ ಹೇಳಿದರೂ ಅವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಪರಮೇಶ್ವರ ಬೇಸರ ವ್ಯಕ್ತಪಡಿಸಿದರು.