ಮಂಡ್ಯ: ಹನುಮಧ್ವಜ ತೆರವು ವಿರೋಧಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಕರೆ ಕೊಟ್ಟಿದೆ. ಬಿಜೆಪಿ ಹೋರಾಟಕ್ಕೆ ಜೆಡಿಎಸ್ ನಾಯಕರೂ ಸಾಥ್ ನೀಡಿದ್ದಾರೆ. ಮಂಡ್ಯದಲ್ಲಿ ಇಂದು ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೆರಗೋಡು ಗ್ರಾಮದಿಂದ ಪಾದಯಾತ್ರೆ ಆರಂಭವಾಗಲಿದೆ.
ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಸಂಘರ್ಷ ತಾರಕಕ್ಕೇರಿದೆ.ರಾಜ್ಯಾದ್ಯಂತ ಹೋರಾಟದ ಕಿಚ್ಚು ಹೆಚ್ಚಾಗಿದೆ. ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾಷದಯಾತ್ರೆಗೆ ಚಾಲನೆ ನೀಡಲಾಗುತ್ತದೆ. 15ಕಿ.ಮೀ ಸಾಗಲಿರುವ ಪಾದಯಾತ್ರೆ ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮಾರ್ಗವಾಗಿ ಮಂಡ್ಯದ ಶ್ರೀಕಾಳಿಕಾಂಭ ದೇವಾಲಯ ಪ್ರವೇಶಿಸಲಿದೆ. ಅಲ್ಲಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮುಂದುವರಿಯಲಿದೆ. ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಹನುಮ ಧ್ವಜ ಪುನರ್ ಸ್ಥಾಪನೆಗೆ ಆಗ್ರಹಿಸಲಾಗುತ್ತದೆ.
ಜೆಡಿಎಸ್-ಬಿಜೆಪಿ ಸೇರಿ 10,000 ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮಾಜಿ ಸಚಿವ ಸಿ.ಟಿ ರವಿ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಪ್ರೀತಂ ಗೌಡ, ಸುರೇಶ್ ಗೌಡ, ಡಿಸಿ ತಮ್ಮಣ್ಣ ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಸದಸ್ಯರು ತಿಳಿಸಿದ್ದಾರೆ.
400ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಪಾದಯಾತ್ರೆ ವೇಳೆ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದೆ. ಕೆರಗೋಡು, ಪಾದಯಾತ್ರೆ ಮಾರ್ಗ, ಡಿಸಿ ಕಚೇರಿ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮಂಡ್ಯ ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಎಸ್ಪಿ, ಎಎಸ್ಪಿ, ಇನ್ಸ್ಪೆಕ್ಟರ್ಗಳು ಸೇರಿ 400ಕ್ಕೂ ಹೆಚ್ಚು ಪೊಲೀಸರ ವ್ಯವಸ್ಥೆ ಕಲ್ಪಿಸಲಾಗಿದೆ.