ಬೆಳಗಾವಿ : ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಆಗಿದ್ರಿ. ಕಾಂಗ್ರೆಸ್ನಲ್ಲಿ ನಿಮಗೆ ಡಿಸಿಎಂ ಆಗುವ ಆಸೆ ಹಾಗೂ ಅವಕಾಶ ಇದೆಯೇ? ಎಂಬ ಪ್ರಶ್ನೆಗೆ ಶಾಸಕ ಲಕ್ಷ್ಮಣ ಸವದಿ ಉತ್ತರಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿರುವ ಅವರು, ನನ್ನ ಹಣೆಬರದಲ್ಲಿ ಏನೇನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ. ನೋಡೊಣ ಮುಂದೆ ಕಾಲ ಇದೆ. ನಾವು ಇರ್ತಿವಿ, ನೀವು ಇರ್ತಿರಿ ಎಂದು ಹೇಳಿದ್ದಾರೆ.
ಇತ್ತೀಚಿಗೆ ಡಿಸಿಎಂ ಡಿಕೆಶಿ ಭೇಟಿ ಮಾಡಿ ಮಾತುಕತೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕ್ಷೇತ್ರದಲ್ಲಿ ಒಂದು ನೀರಾವರಿ ಯೋಜನೆ ಮಂಜೂರಾಗಿದೆ. ಅದು ಟೆಂಡರ್ ಪ್ರಕ್ರಿಯೇ ಆಗಿದೆ. ಅದನ್ನು ಭೂಮಿ ಪೂಜೆ ಮಾಡಿ ಚಾಲನೆ ನೀಡಿ ಎಂದು ಹೇಳೊಕೆ ಹೋಗಿದ್ದೆ. ಹೀಗಾಗಿ ಡಿಕೆಶಿಗೆ ಭೇಟಿಯಾಗಿ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಮನಸಿನಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ
ಲಕ್ಷ್ಮಣ ಸವದಿ ಮನಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ನಂತರ ಮಾತನಾಡುತ್ತೇನೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿ, ನನ್ನ ಮನಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದುಕೊಳ್ಳಲು ಆಗಲ್ಲ. ಅದು ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.
ಅವ್ರು ನನ್ನ ಜೊತೆ ಮಾತಾಡೋದು ತಪ್ಪಾ..?
ಬಿ.ಎಲ್ ಸಂತೋಷ್ ಅವರು ನಿಮ್ಮನ್ನು ಸಂಪರ್ಕ ಮಾಡೋಕೆ ಪ್ರಯತ್ನ ಮಾಡಿದ್ದಾರಾ? ಎಂಬ ಪ್ರಶ್ನೆಗೆ, ಅವರು ಯಾರು ನನ್ನ ಸಂಪರ್ಕ ಮಾಡಿಲ್ಲ. ಈಗ ಆ ಪ್ರಶ್ನೆ ಉದ್ಭವಿಸಲ್ಲ. ಅವರಿಗೆ ಅವಶ್ಯಕತೆ ಅನಿವಾರ್ಯ ಇದ್ದಾಗ ಸ್ವಾಭಾವಿಕವಾಗಿ ಕೇಳ್ತಾರೆ. ಆದರೆ, ತೀರ್ಮಾನ ಮಾಡೋದು ನಾನು ಅಲ್ವೆ..? ಸಿಎಂ ಅವರು ನಮ್ಮನೆಯ ಯಜಮಾನ ಇದ್ದಹಾಗೆ, ಅವರು ನನ್ನ ಜೊತೆ ಮಾತನಾಡೋದು ಏನು ತಪ್ಪಾ..? ನಾನು ಪಕ್ಷ ಬಿಡ್ತಿನಿ ಎಂದಾದರೆ ಅವರು ಏನಾದ್ರು ಹೇಳೊಕೆ ಸಾಧ್ಯ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.