ನವದೆಹಲಿ : ಜ್ಞಾನವಾಪಿ ಮಸೀದಿ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಿ ಎಂದು ಮುಸ್ಲಿಂ ಸಮಿತಿಗೆ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಜ್ಞಾನವಪಿ ಮಸೀದಿ ಹಿಂದೂ ದೇವಾಲಯವಾಗಿತ್ತು ಅನ್ನೋದಕ್ಕೆ ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷಾ ವರದಿಯಲ್ಲಿ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಜ್ಞಾನವಪಿ ಮಸೀದಿ ಪರವಾಗಿ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಇಂತೆಜಮಿಯಾ ಮುಸ್ಲಿಮ್ ಸಮಿತಿ ಗೌರವಯುತವಾಗಿ ಮಸೀದಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಮೂಲ ಸ್ಥಳವನ್ನು ಹಿಂದೂಗಳಿಗೆ ನೀಡಬೇಕು ಎಂದು ತಿಳಿಸಿದ್ದಾರೆ.
ಕಾಶಿ ವಿಶ್ವನಾಥನ ಭವ್ಯ ಮಂದಿರನ್ನು ಒಡೆದು ಅದರ ಗೋಡೆಗಳ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿ ಹಿಂದೂ ದೇವಲಾಯದ ಲಿಂಗ, ಮೂರ್ತಿ, ಕಂಬಗಳು ಹಾಗೂ ಶಾಸನಗಳನ್ನು ಪತ್ತೆ ಹಚ್ಚಿದೆ. ಹೀಗಾಗಿ ಹಿಂದೂ ದೇವಾಲಯದ ಮೇಲೆ ಮಸೀದಿ ನಿಂತಿದೆ ಅನ್ನೋದು ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂ ದೇವಾಲಯ ಎಂದು ಘೋಷಿಸಬೇಕು
ಭಾರತೀಯ ಪುರಾತತ್ವ ಇಲಾಖೆ ನೀಡಿರುವ ವರದಿ ಪ್ರಕಾರ, ಈ ಪೂಜಾ ಸ್ಥಳ 1947, ಆಗಸ್ಟ್ 15ರ ದಿನದಿಂದಲೇ ಅಸ್ತಿತ್ವದಲ್ಲಿದೆ. ಹೀಗಾಗಿ, ಪ್ಲೇಸ್ ಆಪ್ ವರ್ಶಿಪ್ ಆ್ಯಕ್ಟ್ 1991ರ ಪ್ರಕಾರ, ಇದನ್ನು ಹಿಂದೂ ದೇವಾಲಯ ಎಂದು ಘೋಷಿಸಬೇಕು ಎಂದು ಅಲೋಕ್ ಕುಮಾರ್ ಆಗ್ರಹಿಸಿದ್ದಾರೆ.