Sunday, November 3, 2024

Bachelor Party Review: ಹಾಸ್ಯಮಿಶ್ರಿತ ಪ್ರಯಾಣದಲ್ಲಿ ದೋಸ್ತಿಗಳ ಮೋಜು, ಮಸ್ತಿ

ರಕ್ಷಿತ್ ಶೆಟ್ಟಿ ನಿರ್ಮಾಣದ ದಿಗಂತ್, ಲೂಸ್ ಮಾದ ಯೋಗಿ ನಟನೆಯ ಬ್ಯಾಚಲರ್ ಪಾರ್ಟಿ ಈ ವಾರ ತೆರೆಗೆ ಬಂದಿದೆ. ಕಿರಿಕ್ ಪಾರ್ಟಿ ಬಳಿಕ ಅದೇ ರೀತಿ ಅಪ್ಪಟ ಮನರಂಜನೆ ಕೊಡೋವಂಥಾ ಸಿನಿಮಾ ಇದು ಅಂತ ಭರವಸೆ ಮೂಡಿಸಿತ್ತು ಬ್ಯಾಚಲರ್ ಪಾರ್ಟಿ. ಹಾಗಾದ್ರೆ ರಕ್ಷಿತ್ ಕೊಟ್ಟಿರೋ ಬ್ಯಾಚಲರ್ ಪಾರ್ಟಿ ಹೇಗೆ ಮೂಡಿಬಂದಿದೆ. ದಿಗಂತ್-ಯೋಗಿ ಕಾಮಿಡಿ ಹೇಗೆ ಮೂಡಿ ಬಂದಿದೆ ಎಂಬುವುದರ ಮಾಹಿತಿ ಇಲ್ಲಿದೆ.

ಚಿತ್ರ: ಬ್ಯಾಚಲರ್ ಪಾರ್ಟಿ

ನಿರ್ದೇಶನ: ಅಭಿಜೀತ್ ಮಹೇಶ್

ನಿರ್ಮಾಣ: ಪರಂವಾಃ ಸ್ಟುಡಿಯೋ

ಸಂಗೀತ: ಅರ್ಜುನ್ ರಾಮು

ಸಿನಿಮಾಟೋಗ್ರಫಿ: ಅರವಿಂದ್ ಕಶ್ಯಪ್

ತಾರಾಗಣ : ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ಸಿರಿ ರವಿಕುಮಾರ್, ಪ್ರಕಾಶ್ ತುಮಿನಾಡ್, ಬಾಲಾಜಿ ಮನೋಹರ್, ಶೈನ್ ಶೆಟ್ಟಿ ಮತ್ತು ಇತರರು.

ಬ್ಯಾಚಲರ್ ಪಾರ್ಟಿ ಸ್ಟೋರಿಲೈನ್

ಬ್ಯಾಚಲರ್ ಪಾರ್ಟಿ ಚಿತ್ರದ ನಾಯಕ ಸಂತೋಷ್ ಮಂಚಾಲೆ ವೈವಾಹಿಕ ಜೀವನದಲ್ಲಿ ನೊಂದು ಹೋಗಿರ್ತಾನೆ. ಗಯ್ಯಾಳಿ ಹೆಂಡತಿಯ ಕಿರಿಕಿರಿಯಿಂದ ನೊಂದ ಸಂತೋಷ್ ಅಪರೂಪಕ್ಕೆ ಗೆಳೆಯನ ಬ್ಯಾಚಲರ್ ಪಾರ್ಟಿಗೆ ಹೋಗಿ ಕುಣಿದು, ಕುಡಿದು ಸಂತೋಷ ಪಡ್ತಾನೆ. ಆದ್ರೆ ಅಲ್ಲಿ ಸಿಗುವ ಅವನ ಸ್ಕೂಲ್ ಗೆಳೆಯ ಮ್ಯಾಡಿ ಈ ಪಾರ್ಟಿಯನ್ನ ಮತ್ತೊಂದು ಲೆವೆಲ್​ಗೆ ತೆಗೆದುಕೊಂಡು ಹೋಗ್ತಾನೆ. ರಾತ್ರೋರಾತ್ರಿ ಬ್ಯಾಂಕಾಂಕ್​ಗೆ ಹಾರುವ ಈ ಗೆಳೆಯರು ಜೊತೆಗೆ ವೀಲ್ ಚೇರ್​ನಲ್ಲೇ ಜೀವನ ಕಳೆಯೋ ತಮ್ಮ ಪಿಟಿ ಮಾಸ್ಟರ್ ಅನ್ನೂ  ಕರೆದೊಯ್ದಿರ್ತಾರೆ. ಅತ್ತ ಬ್ಯಾಂಕಾಂಕ್​ನಲ್ಲಿ ಸಂತೋಷನ ಹೆಂಡತಿಯೂ ಬಂದಿರ್ತಾಳೆ. ಈ ಪಾರ್ಟಿ, ಮೋಜು, ಮಸ್ತಿ ಒಂದಿಷ್ಟು ಅನಿರೀಕ್ಷಿತ ತಿರುವುಗಳು ನಡೆದು ನಗೆಬುಗ್ಗೆ ಉಕ್ಕಿಸೋ ಕಹಾನಿಯೇ ಬ್ಯಾಚಲರ್ ಪಾರ್ಟಿ.

ಹೇಗಿದೆ ಬ್ಯಾಚಲರ್ ಪಾರ್ಟಿ ಕಲಾವಿದರ ಪರ್ಫಾರ್ಮೆನ್ಸ್

ನೊಂದ ಗಂಡ ಸಂತೋಷ್ ಮಂಚಾಲೆ ಪಾತ್ರದಲ್ಲಿ ದಿಗಂತ್ ಸಖತ್ ಆಗಿ ಪರ್ಫಾರ್ಮ್​ ಮಾಡಿದ್ದಾರೆ. ಮ್ಯಾಡಿ ಪಾತ್ರದಲ್ಲಿ ಮಿಂಚಿರೋ ಯೋಗಿ ಮತ್ತೊಮ್ಮೆ ತಾವೆಂಥಾ ಕಲಾವಿದ ಅನ್ನೋದನ್ನ ತೋರಿಸಿದಾರೆ. ಯೋಗಿ ಕಾಮಿಡಿ ಟೈಮಿಂಗ್ ಅದ್ಭುತ. ಇನ್ನೂ ಗಯ್ಯಾಳಿ ಹೆಂಡತಿಯಾಗಿ ಸಿರಿ ಸೊಗಸಾಗಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಇಡೀ ಚಿತ್ರ ವ್ಹೀಲ್ ಚೇರ್​ ಮೇಲೆ ಇದ್ರೂ ಪ್ರೇಕ್ಷಕರನ್ನ ಎದ್ದು ಬಿದ್ದು ನಗುವಂತೆ ಮಾಡ್ತಾರೆ. ಪ್ರಕಾಶ್ ತುಮಿನಾಡ್, ಬಾಲಾಜಿ ಮನೋಹರ್ ಕೂಡ ಪೈಪೊಟಿಗೆ ಬಿದ್ದಂತೆ ನಟಿಸಿದ್ದಾರೆ.

ಬ್ಯಾಚಲರ್ ಪಾರ್ಟಿ ಪ್ಲಸ್ ಪಾಯಿಂಟ್ಸ್

  • ಅಭಿಷೇಕ್ ಮಹೇಶ್ ಕಥೆ – ಸಂಭಾಷಣೆ
  • ಕಲರ್​​ಫುಲ್ ಲೊಕೇಷನ್ಸ್ – ಅದ್ಧೂರಿ ಮೇಕಿಂಗ್
  • ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ
  • ಯೋಗಿ – ಪ್ರಕಾಶ್ ತುಮಿನಾಡ್ ಕಾಮಿಡಿ ಪಂಚ್

ಬ್ಯಾಚಲರ್ ಪಾರ್ಟಿ ಮೈನಸ್ ಪಾಯಿಂಟ್ಸ್

ಬ್ಯಾಚಲರ್ ಪಾರ್ಟಿಯ ಇಡೀ ಚಿತ್ರಕಥೆ ನಗಿಸೋದಕ್ಕಂತ್ಲೇ ಹೆಣೆಯಲಾಗಿದೆ. ಆದ್ರೆ ಕೆಲವು ಕಡೆ ನಗಿಸೋಕೆ ನಿರ್ದೇಶಕರು ಕಷ್ಟ ಪಟ್ಟಂತೆ ಕಾಣುತ್ತೆ. ಬ್ಯಾಂಕಾಂಕ್​ ಚೇಸಿಂಗ್ ಸೀನ್​ ಹಾಸ್ಯ ಉಕ್ಕಿಸೋ ಬದಲು ಹಾಸ್ಯಾಸ್ಪದ ಅನ್ನಿಸಿತ್ತು.

ಬ್ಯಾಚಲರ್ ಪಾರ್ಟಿ ಚಿತ್ರಕ್ಕೆ ಪವರ್ ರೇಟಿಂಗ್

5 ಕ್ಕೆ 3 ಸ್ಟಾರ್.

ಬ್ಯಾಚಲರ್ ಪಾರ್ಟಿ ಫೈನಲ್ ಸ್ಟೇಟ್​​ಮೆಂಟ್

ಬ್ಯಾಚಲರ್ ಪಾರ್ಟಿ ಒಂದು ಔಟ್ ಎಂಡ್ ಔಟ್ ಕಾಮಿಡಿ ಸಿನಿಮಾ. ಎರಡೂವರೇ ಗಂಟೆ ನಿಮ್ಮನ್ನ ಹಾಸ್ಯದ ಕಡಲಲ್ಲಿ ತೇಲಿಸುವ ಸಿನಿಮಾ. ಇಂಥಾ ಬ್ಯ್ಲಾಕ್ ಕಾಮಿಡಿ ಜಾನರ್ ಸಿನಿಮಾಗಳು ಕನ್ನಡದಲ್ಲಿ ಬಂದಿದ್ದು ಕಡಿಮೆ ಅಂತಾನೇ ಹೇಳಬಹುದು. ಸೆನ್ಸಿಬಲ್ ಕಾಮಿಡಿ ಇಷ್ಟ ಪಡೋರಿಗೆ ಬ್ಯಾಚಲರ್ ಪಾರ್ಟಿ ಖಂಡಿತ ಇಷ್ಟವಾಗುತ್ತೆ. ತೀರಾ ಕಿರಿಕ್ ಪಾರ್ಟಿ ರೇಂಜ್​ಗಿಲ್ಲವಾದ್ರೂ ಈ ಪಾರ್ಟಿ ನೋಡುಗರಿಗೆ ನಿರಾಸೆ ಅಂತೂ ಮಾಡಲ್ಲ.

  • ಅಮೀತ್, ಫಿಲಂ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES