ಕೊಡಗು : ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಆರ್ಥಿಕವಾಗಿ ಇನ್ನೂ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಾವು ತಂದ ಗ್ಯಾರಂಟಿಗಳನ್ನು ಪ್ರಧಾನಿ ಮೋದಿ ಆಡಿಕೊಂಡರು. ಜಾರಿಗೆ ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಅಂದ್ರು. ಈಗ ಅದೇ ಮೋದಿ, ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿದ್ದಾರೆ ಎಂದು ಕುಟುಕಿದರು.
ನಾವು ಜನರ ಋಣ ತೀರಿಸಿದ್ದೇವೆ
ಬಿಜೆಪಿ ಪಕ್ಷದವರು ತಮ್ಮ ಪ್ರಣಾಳಿಕೆಗಳಲ್ಲಿ ಕೊಟ್ಟ ಆಶ್ವಾಸನೆಗಳಲ್ಲಿ ಶೇ.10 ರಷ್ಟನ್ನೂ ಜಾರಿ ಮಾಡಲೇ ಇಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ಕೊಟ್ಟರು.
ಈ ಕಾರಣಕ್ಕೆ ಬಿಜೆಪಿಯನ್ನು ತಿರಸ್ಕರಿಸಬೇಕು
ನಾಡಿನ ಯುವಕರಿಗೆ ಉದ್ಯೋಗ ನೀಡಲಿಲ್ಲ. ಕೇವಲ ಯುವ ಸಮೂಹವನ್ನು, ವಿದ್ಯಾರ್ಥಿ ಸಮೂಹವನ್ನು ಭಾವನಾತ್ಮಕವಾಗಿ ಕೆರಳಿಸಿದರು. ಅವರ ಬದುಕಿನ ಜೊತೆ ಚೆಲ್ಲಾಟ ಆಡಿದ್ದಾರೆ. ಈ ಕಾರಣಕ್ಕಾಗಿ ಜನತೆ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.