ಬೆಂಗಳೂರು : ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅಯೋಧ್ಯೆಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ.
ಅಯೋಧ್ಯೆಯಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಅರುಣ್ ಯೋಗಿರಾಜ್ ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಮೈಸೂರು ಪೇಟ ತೊಡಿಸಿ, ಹೂವಿನ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಜೈ ಶ್ರೀರಾಮ್.. ಜೈ ಶ್ರೀರಾಮ್.. ಘೋಷಣೆಗಳು ಮೊಳಗಿದವು. ಅರುಣ್ ಯೋಗಿರಾಜ್ ಅವರ ಸ್ವಾಗತಕ್ಕೆ ವಿಮಾನ ನಿಲ್ದಾಣದ ಬಳಿ ಸಾಕಷ್ಟು ಜನ ಜಮಾಯಿಸಿದ್ದರು. ಈ ವೇಳೆ ಅರುಣ್ ಕುಟುಂಬಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ ಸಾಕಷ್ಟು ಜನ ಅವರನ್ನು ಸ್ವಾಗತ ಮಾಡಿದ್ದಾರೆ. ಬಾಲರಾಮನ ಪ್ರಾಣ ಪ್ರತಿಷ್ಠೆ ಬಳಿಕ ಅರುಣ್ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
ನಮ್ಮ ಗುರುಗಳಿಗೆ ಧನ್ಯವಾದ
ಈ ದೊಡ್ಡ ಅವಕಾಶ ಸಿಕ್ಕಿದಕ್ಕೆ ನಮ್ಮ ಗುರುಗಳಿಗೆ ಧನ್ಯವಾದ. ರಾಮನ ಮೂರ್ತಿ ಕೆತ್ತಲು ನಾನು 7 ತಿಂಗಳಿನಿಂದ ಶ್ರಮಿಸಿದ್ದೆ. ಶ್ರೀರಾಮನೇ ಕೆತ್ತನೆ ಮಾಡಿಸಿಕೊಂಡಿದ್ದಾರೆ. ಮಂದಿರಕ್ಕೆ 200 ಕೆಜಿ ಚಿನ್ನ ಕೊಡಲು ಭಕ್ತರು ಸಿದ್ಧರಿದ್ದಾರೆ. ಇದು ಕಲೆಗೆ ಸಿಕ್ಕ ಗೌರವ ಅನಿಸುತ್ತಿದೆ. ಜನ ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ ಖುಷಿಯಾಗಿದೆ ಎಂದು ಅರುಣ್ ಯೋಗಿರಾಜ್ ಹೇಳಿದ್ದಾರೆ.