ಹಾಸನ : ನಾನು ಪ್ರಧಾನಿಯಾಗಿ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿದ್ದೆ. ಆದರೂ, ಈ ಕಾಂಗ್ರೆಸ್ನವರು ಯಾಕೆ ತೆಗೆದ್ರು? ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಗುಡುಗಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ 13 ತಿಂಗಳು ಮುಖ್ಯಮಂತ್ರಿಯಾಗಿ ಉತ್ತಮವಾಗಿ ಕೆಲಸ ಮಾಡಿದ್ದರು. ಅವರನ್ನ ತೆಗೆದದ್ದು ಯಾರು? ಎಂದು ಕಿಡಿಕಾರಿದರು.
ಹೇಮಾವತಿ ನೀರನ್ನ ಕಾವೇರಿ ಮೂಲಕ ತಮಿಳುನಾಡಿಗೆ ಬಿಡಿ ಎಂದು ಆದೇಶ ಆಗಿದೆ. ಈ ವಿಚಾರದಲ್ಲಿ ಹೋರಾಟ ಮಾಡುವ ಯೋಗ್ಯತೆ ಇಲ್ಲ. ಕಾವೇರಿ ವಿಚಾರ ಬಂದಾಗ ನಾನು ರಾಜ್ಯ ಸಭೆಯಲ್ಲಿ ಮುಷ್ಟಿ ಹಿಡಿದು, ಟೇಬಲ್ ಹಿಡಿದು ಮೇಲೆದ್ದು ಮಾತನಾಡಿದ್ದೇನೆ. ರಾಜಕೀಯ ದೇವೇಗೌಡರ ಕುಟುಂಬದ ಆಸ್ತಿನಾ? ಎಂದು ಕೇಳುತ್ತಾರೆ. ಹೌದು, ಇದು ನನ್ನ ಆಸ್ತಿ ಅಲ್ವಾ? ಎಂದು ಹರಿಹಾಯ್ದರು.
ಇದನ್ನ ರಾಜ್ಯ ಎಂದು ಕರೆಯುತ್ತಾರಾ?
ಮುಸ್ಲಿಮರಿಗೆ 4% ಮೀಸಲಾತಿ ತೆಗದಿದ್ದರು. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಾಗ ಅದನ್ನ ವಾಪಾಸ್ ತೆಗೆಯುತ್ತೇವೆ ಎಂದರು. ಅಧಿಕಾರಕ್ಕೆ ಬಂದವರೆಲ್ಲಾ ತೆಗೆದಿದ್ದಾರಾ? ಈ ರಾಜ್ಯದಲ್ಲಿ ಇವತ್ತು ಏನಾಗಿದೆ? ಇದನ್ನ ರಾಜ್ಯ ಎಂದು ಕರೆಯುತ್ತಾರಾ? ಸಿದ್ದರಾಮಯ್ಯರನ್ನ ನಾನು ದೊಡ್ಡ ಮಟ್ಟಕ್ಕೆ ಯೋಚನೆ ಮಾಡಿದ್ದೆ. ಇಂದು ಅವರ ಆಡಳಿತದಲ್ಲಿ ಈ ಪರಿಸ್ಥಿತಿ ಬಂದಿದೆ ಎಂದು ವಾಗ್ದಾಳಿ ನಡೆಸಿದರು.