ಮೈಸೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ (ಪಾರ್ಲಿಮೆಂಟ್ ಎಲೆಕ್ಷನ್) ಡಬಲ್ ವೋಟ್ ಹಾಕಿ ಗೆಲ್ಲಿಸಿ ಆಮೇಲೆ ಜೈಕಾರ ಹಾಕಿ. ಪಾರ್ಲಿಮೆಂಟ್ ನಲ್ಲಿ ಹೆಚ್ಚಿನ ಶಕ್ತಿ ಪಕ್ಷಕ್ಕೆ ತುಂಬಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ಕೊಟ್ಟರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಶಾಸಕರನ್ನ ನೀಡಿದ್ದೀರಿ. ಪಿರಿಯಾಪಟ್ಟಣ ಜನರಿಗೆ ಧನ್ಯವಾದ ತಿಳಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಿಕ್ಕೆ ತಂದ ಮೇಲೆ ಒಳ್ಳೆಯ ಅಭಿವೃದ್ಧಿ ಮಾಡಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ರೈತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಸಚಿವ ವೆಂಕಟೇಶ್ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ರೈತರ ಬವಣೆ ಮತ್ತು ನೀರಿನ ಸಮಸ್ಯೆ ಬಗೆಹರಿಸಲು ನಾವೆಲ್ಲರೂ ಸಿದ್ದರಿದ್ದೇವೆ. ನಾವಿನ್ನು ಸಾಲ ತೀರಿಸೋದು ಬಾಕಿಯಿದೆ ಎಂದು ತಿಳಿಸಿದರು.
ಮಂತ್ರಾಕ್ಷತೆಯಲ್ಲಿ ಅನ್ನಭಾಗ್ಯ ಅಕ್ಕಿ ಇದೆ
ನಮಗೂ ಭಾವನೆಗಳಿವೆ. ಆದರೆ, ಬದುಕು ನಡೆಯಬೇಕಲ್ಲ. ನಿಮ್ಮ ಬದುಕಿಗೆ ಬೇಕಾದ ಯೋಜನೆಗಳನ್ನು ನಾವು ಉಚಿತ ಗ್ಯಾರಂಟಿ ಮೂಲಕ ನೀಡಿದ್ದೇವೆ. ಬಿಜೆಪಿಯವರು ನಿಮಗೆ ಕೊಟ್ಟ ಮಂತ್ರಾಕ್ಷತೆಯಲ್ಲಿ ಸಿದ್ದರಾಮಯ್ಯನವರು ಕೊಟ್ಟ ಅನ್ನಭಾಗ್ಯ ಯೋಜನೆಯ ಅಕ್ಕಿ ಇದೆ ಎಂದು ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದರು.