Wednesday, January 22, 2025

ನಾನ್ ಹೇಳ್ತಿನಿ, ನೀವು ಕೇಳೇಬೇಕು: ವಿನಯ್ ವಿರುದ್ಧ ತಿರುಗಿಬಿದ್ದ ಡ್ರೋಣ್ ಪ್ರತಾಪ್‌ 

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಫಿನಾಲೆ ವಾರದಲ್ಲಿ ಸ್ಪರ್ಧಿಗಳ ನಡುವಿನ ಹಣಾಹಣಿ ಜೋರಾಗಿದೆ. ಈಗಿರುವ ಆರು ಸದಸ್ಯರು ತಮ್ಮ ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಹೌದು, ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕೆ ಬಿಗ್ ಬಾಸ್ ಒಂದು ಅವಕಾಶವನ್ನು ನೀಡಲಾಗಿದೆ. ಸದಸ್ಯರ ಎದುರಿಗೆ ಆರು ಪಂಚಿಂಗ್ ಬ್ಯಾಗ್ ಇಟ್ಟು ಅವುಗಳ ಮೇಲೆ ಆರು ಸ್ಪರ್ಧಿಗಳ ಫೋಟೊ ಛಾಪಿಸಲಾಗಿದೆ. ಪ್ರತಿ ಸದಸ್ಯರೂ ತಾವು ಆಯ್ಕೆ ಮಾಡಿಕೊಳ್ಳುವ ಒಬ್ಬ ಸ್ಪರ್ಧಿಯ ಎದುರು ನಿಂತು ಆ ಸ್ಪರ್ಧಿಗೆ ಹೇಳಬೇಕೆಂದಿರುವ ಆಕ್ರೋಶದ ಮಾತುಗಳನ್ನು ಹೇಳಿ ಅವರ ಫೋಟೊ ಇರುವ ಬ್ಯಾಗ್‌ಗೆ ಪಂಚ್ ಮಾಡಬೇಕು.

ವಿನಯ್ ಅವರು ಪ್ರತಾಪ್ ಚಿತ್ರವಿರುವ ಬ್ಯಾಗ್ ಎದುರು ನಿಂತಿದ್ದಾರೆ. ‘ಪ್ರತಾಪ್, ನೀನು ನನ್ನ ಬಗ್ಗೆ ಸರಿಯಾಗಿ ಮಾತಾಡುವುದನ್ನು ಕಲಿತುಕೋ, ಇಲ್ಲಾಂದ್ರೆ ಪರಿಣಾಮ ಸರಿಯಾಗಿರಲ್ಲ’ ಎಂದು ಹೇಳಿ ಬಲವಾಗಿ ಪ್ರತಾಪ್ ಫೋಟೊ ಇರುವ ಬ್ಯಾಗ್ ಮೇಲೆ ಪಂಚ್ ಮಾಡಿದ್ದಾರೆ. ಅದೇ ಗತ್ತಿನಲ್ಲಿ ಪ್ರತಾಪ್‌ ಕೂಡ ವಿನಯ್‌ಗೆ ಪ್ರತಿಕ್ರಿಯಿಸಿದ್ದಾರೆ.

ಕೈಗೆ ಬಾಕ್ಸಿಂಗ್ ಗೌಸ್ ತೊಟ್ಟ ಪ್ರತಾಪ್, ವಿನಯ್ ಅವರನ್ನೆ ಅನುಕರಣೆ ಮಾಡಿದ್ದಾರೆ. ‘ನಿಮ್ಮ ಅರಚಾಟಕ್ಕೆ…. ವೋ ಪ್ರತಾಪ್… ಹೋ ಪ್ರತಾಪ್… ಪ್ರತಾಪ್ ಎಂದರೆ ಇಲ್ಲಿ ಯಾರೂ ಹೆದರಿಕೊಳ್ಳೋರಿಲ್ಲ. ನೀವು ಅತ್ತರೆ ಅದು ಪ್ರೀತಿ… ನಾನು ನನ್ನ ತಂದೆ-ತಾಯಿ ನೆನಪಿಸಿಕೊಂಡು ಅತ್ತರೆ ಅದು ಸಿಂಪತಿ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿನಯ್, ‘ನೀನು ನನಗೆ ಬುದ್ದಿವಾದ ಹೇಳಬೇಕಾಗಿಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ.

ಅದಕ್ಕೂ ಪ್ರತಾಪ್, ‘ಅಯ್ಯೋ ವಿನಯಣ್ಣ… ಭಯ ಅಣ್ಣ… ನಂಗೆ ಆಗ್ತಾ ಇಲ್ಲ ಅಣ್ಣಾ…’ ಎಂದು ಮುದುರಿದ ಹಾಗೆ ನಟಿಸಿದ್ದಾರೆ. ‘ನಿನಗೆ ಹೆದರಿಸೋದಕ್ಕಲ್ಲ ಮರಿ ನಾನು ಹೇಳ್ತಾ ಇರೋದು’ ಎಂದು ವಿನಯ್ ಹೇಳಿದರೆ, ‘ಕೇಳಿ ಅಣ್ಣಾ ನಾನ್ಹೇಳ್ತಿನಿ… ಕೇಳಿ… ಕೇಳೇಕು ನೀವೀವತ್ತು’ ಎಂದು ಇನ್ನಷ್ಟು ಕೆಣಕಿದ್ದಾರೆ. .

 

RELATED ARTICLES

Related Articles

TRENDING ARTICLES