ಚಿಕ್ಕಬಳ್ಳಾಪುರ : ಕೈಯಲ್ಲಿ ಕೊಡುವ ಬದಲು ಪ್ರಧಾನಿ ಮೋದಿ ಬಾಯಿಗೆ ತೀರ್ಥ ಹಾಕಿದ್ದು ತಪ್ಪು. ಇದು ಹಿಂದೂ ಧರ್ಮಕ್ಕೆ ಬಂದ ದುಸ್ಥಿತಿ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನರೇಂದ್ರ ಮೋದಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನಡೆಸಿಕೊಟ್ಟಿದ್ದು ತಪ್ಪು ಎಂದು ತಿಳಿಸಿದರು.
ರಾಮಮಂದಿರದ ಕೆಲಸ ಸಂಪೂರ್ಣ ಆಗಲಿಲ್ಲ. ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದು ಸಹ ತಪ್ಪು. ನಿಜವಾದ ಬ್ರಾಹ್ಮಣರು, ನಿಜವಾದ ಸ್ಚಾಮಿಗಳಾಗಿದ್ದರೆ ಪ್ರಧಾನಿ ಮೋದಿಯನ್ನ ಗರ್ಭ ಗುಡಿಗೆ ನಿಷೇಧ ಮಾಡಬೇಕಿತ್ತು ಎಂದು ಹೇಳಿದರು.
ಗರ್ಭಗುಡಿಗೆ ಉಪವಾಸ ಮಾಡದೆ ಹೋಗಿ ಪೂಜೆ ಮಾಡಿದ್ರೆ ಸ್ಥಳ ಅಪವಿತ್ರ ಆಗಲಿದೆ, ಶಕ್ತಿ ಉದ್ಭವವಾಗಲ್ಲ. ಆ ದೇವಾಲಯಕ್ಕೆ ಪಾವಿತ್ರತೆ ಬರಲಿದೆಯೇ..? ಇದು ವಿಪರ್ಯಾಸ. ನಾನು ಬೆಳಗ್ಗೆ ವಾಕಿಂಗ್ ಮಾಡುವಾಗ ಡಾಕ್ಟರ್ ಬಳಿ ಚರ್ಚೆ ಮಾಡಿದೆ. 11 ದಿನ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ, ಮನುಷ್ಯ ಬದುಕಿದ್ರೆ ಪವಾಡ. ಹಾಗಾಗಿ, ಉಪವಾಸ ಮಾಡಿರೋದು ಅನುಮಾನ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಮೋದಿ 11 ಉಪವಾಸ ವ್ರತ
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಜನವರಿ 12 ರಿಂದ 11 ದಿನಗಳ ಕಾಲ ಪ್ರಧಾನಿ ಮೋದಿ ಉಪವಾಸ ವ್ರತ ಕೈಗೊಂಡಿದ್ದರು. ಮಹಾರಾಷ್ಟ್ರದ ನಾಸಿಕ್ ನಲ್ಲಿ ಪ್ರಸಿದ್ಧ ಕ್ಷೇತ್ರ ಶ್ರೀ ಕಲಾರಾಮ್ ದೇವಾಲಯದಲ್ಲಿ ದರ್ಶನ ಪಡೆದ ಪ್ರಧಾನಿ ಮೋದಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಉಪವಾಸ ವ್ರತ ಶುರು ಮಾಡಿದ್ದರು. ನಿನ್ನೆ ರಾಮಮಂದಿರದಲ್ಲಿ ವ್ರತ ಅಂತ್ಯಗೊಳಿಸಿದರು.