ಬೆಳಗಾವಿ : ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ನನಗೇನೂ ಸೂಚಿಸಿಲ್ಲ. ನನಗೆ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ನ ಯಾವ ನಾಯಕರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಸೋಲುವ ಕ್ಷೇತ್ರದ ಸಚಿವರ ತಲೆದಂಡ ಆಗುತ್ತಾ? ಎಂಬ ಪ್ರಶ್ನೆ, ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಿಲ್ಲ. ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ವೀಕ್ ಇರುವುದು ನಿಜ. 28ರ ಪೈಕಿ 20ರಲ್ಲಿ ನಾವು ಸ್ಟ್ರಾಂಗ್ ಇದ್ದೇವೆ, 8 ಕ್ಷೇತ್ರಗಳಲ್ಲಿ ವೀಕ್ ಇದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸೋತರೆ ಸಚಿವರ ತಲೆದಂಡ?
ತಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಸಚಿವರೂ ಪ್ರಯತ್ನ ಮಾಡಿರುತ್ತಾರೆ. ನಮ್ಮ ಸಚಿವರ ಪ್ರಯತ್ನದ ನಂತರವೂ ಕೆಲವೊಮ್ಮೆ ಫಲ ಸಿಗಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಚಿವರ ತಲೆದಂಡವಾಗುತ್ತದೆ ಎಂಬುದು ಶುದ್ಧ ಸುಳ್ಳು. ಈ ರೀತಿ ಹೈಕಮಾಂಡ್ ಯಾರಿಗೂ ಸೂಚಿಸಿಲ್ಲ, ಇದು ಕೇವಲ ಊಹಾಪೋಹವಷ್ಟೇ ಎಂದು ವದಂತಿಗಳಿಗೆ ಅಂತ್ಯವಾಡಿದರು.
ಎಲ್ಲರೂ ಪ್ರಯತ್ನ ಮಾಡಬೇಕು, ಮಾಡ್ತಾರೆ
ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಯತ್ನ ಮಾಡಬೇಕು, ಮಾಡ್ತಾರೆ. ಲೋಕಸಭೆ ಚುನಾವಣೆ ಸಂಬಂಧ ಈಗಾಗಲೇ ದೆಹಲಿ ಹಾಗೂ ಬೆಂಗಳೂರಲ್ಲಿ ಸಭೆ ಆಗಿದೆ. ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರದಿಂದ ಅನೇಕರು ಅರ್ಜಿ ಸಲ್ಲಿಸದ್ದಾರೆ. ಕೊನೆ ಕ್ಷಣದಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.