ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೆ ಅಂತಿಮ ಹಂತದ ಸಿದ್ಧತೆಗಳು ಆರಂಭವಾಗಿದೆ. ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರೋ ರಾಮ ಲಲ್ಲಾ ಮೂರ್ತಿಯ ಮೊದಲ ಫೋಟೋ ಬಿಡುಗಡೆಯಾಗಿದೆ.
ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ರಾಮಲಲ್ಲಾನ ಮೂರ್ತಿಯು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿ ಪ್ರವೇಶಿಸಿದೆ. ಪ್ರಾಣಪ್ರತಿಷ್ಠಾಪನೆಗೂ ಮುಂಚಿನ ವಿಧಿವಿಧಾನಗಳ ಭಾಗವಾಗಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಇರಿಸಲಾಗಿದೆ. ಆದರೆ ಇದೀಗ ಇದೇ ಮೊದಲ ಬಾರಿಗೆ ರಾಮಲಲ್ಲಾ ಮೂರ್ತಿಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ನಾಲಿಗೆಯಿಂದ ಮೂಡಿದ ಶ್ರೀರಾಮ
51 ಇಂಚಿನ ಅಂದ – ಚೆಂದದ ಮುದ್ದಾಗಿ ನಗುವ ಶ್ರೀ ರಾಮಲಲ್ಲಾ ಮೂರ್ತಿ ಇದಾಗಿದೆ. ಮೂರ್ತಿಯ ಪ್ರಭಾವಳಿಯ ಸುತ್ತ ವಿಷ್ಣುವಿನ ದಶಾವತಾರ ಕಾಣಸಿಗುತ್ತೆ. ಮೂರ್ತಿಯ ಪ್ರಭಾವಳಿಯ ಕೆಳಗೆ ನಿಂತ ಬಲಭಾಗ ಭಕ್ತಾಂಜನೇಯ, ಎಡಭಾಗ ಗರುಡ ಮೂರ್ತಿ ಕಾಣಸಿಗುತ್ತೆ. ರಾಮಲಲ್ಲಾ ಇನ್ನು ರಾಮನ ಬಲಗೈನಲ್ಲಿ ಚಿನ್ನದ ಬಾಣ ಹಾಗೂ ಎಡಗೈನಲ್ಲಿ ಚಿನ್ನದ ಬಿಲ್ಲು ಹಿಡಿದು, ಬ್ರಹ್ಮಕಮಲದ ಮೇಲೆ ರಾಮ ಲಲ್ಲಾ ದರ್ಶನ ನೀಡಲಿದ್ದಾರೆ.
ಜ.22 ರಂದು ಕಣ್ಣು ತೆರೆಯೋ ಶಾಸ್ತ್ರ
500 ವರ್ಷದ ಬಳಿಕ ಅಂತಿಮವಾಗಿ ರಾಮಜನ್ಮಭೂಮಿಯಲ್ಲೇ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ. ಗರ್ಭಗುಡಿಯ ಮಾರ್ಬಲ್ ಮೇಲೆ ರಾಮಲಲ್ಲಾ ಪ್ರತಿಷ್ಠಾಪನೆ ಪೂರ್ಣವಾಗಿದ್ದು, ರಾಮಲಲ್ಲಾ ಮೂರ್ತಿಯ ಕಣ್ಣಿಗೆ ಸದ್ಯ ಬಟ್ಟೆ ಕಟ್ಟಲಾಗಿದೆ. ಇದೇ ಜನವರಿ 22 ರಂದು ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆದು ಕಣ್ಣುತೆರೆಯುವ ಶಾಸ್ತ್ರ ನಡೆಯಲಿದೆ. ಬಳಿಕ ಮೂರ್ತಿಗೆ ಕನ್ನಡಿ ತೋರಿಸಿ ಮೊದಲು ತನ್ನನ್ನು ತಾನೇ ನೋಡಿಕೊಳ್ಳುವ ಶಾಸ್ತ್ರ ಮಾಡಲಾಗುತ್ತಿದೆ.
ಅಯೋಧ್ಯೆಯಲ್ಲಿ ಹೈ ಸೆಕ್ಯುರಿಟಿ
ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಆವರಣಕ್ಕೆ ಪದೇಪದೆ ಬರುವವರು, ಹಾಗೆ ಬರುವವರ ಚಲನವಲನ, ಯಾವುದೇ ಶಂಕಾಸ್ಪದ ವರ್ತನೆ ಕಂಡುಬಂದರೆ ಕೂಡಲೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸ್ವಯಂಚಾಲಿತವಾಗಿ ಅಲರ್ಟ್ ನೀಡುತ್ತದೆ. ಅದರಂತೆ ಭದ್ರತಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ.