ಬೆಂಗಳೂರು : ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ರಾಮಮಂದಿರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಪ್ರಾಣ ಪ್ರತಿಷ್ಠಾ ಕಾರ್ಯದ ಬಗ್ಗೆ ಮಾತನಾಡಿರುವ ಅವರು, ಮಸೀದಿ ಕೆಡವಿ ಮಂದಿರ ಕಟ್ಟುವುದನ್ನು ನಾವು ಒಪ್ಪುವುದಿಲ್ಲ. ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕರುಣಾನಿಧಿ ಅವರು ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಯಾವಾಗಲೂ ಹೇಳುತ್ತಿದ್ದರು. ಮಂದಿರ ಕಟ್ಟುವುದು ಸಮಸ್ಯೆಯಲ್ಲ. ಆದರೆ, ಮಸೀದಿ ಕೆಡವಿ ಅಲ್ಲಿ ಮಂದಿರ ನಿರ್ಮಿಸುವುದನ್ನು ನಾವು ಒಪ್ಪುವುದಿಲ್ಲ. ಆಧ್ಯಾತ್ಮಿಕತೆ ಮತ್ತು ರಾಜಕೀಯವನ್ನು ಬೆರೆಸಬೇಡಿ ಎಂದು ಉದಯನಿಧಿ ಸ್ಟಾಲಿನ್ ತಿಳಿಸಿದ್ದಾರೆ.
ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ
ಉದಯನಿಧಿ ಸ್ಟಾಲಿನ್ ಸನಾತನ ಮತ್ತು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದ್ದರು. ಸ್ಟಾಲಿನ್ ಹೇಳಿಕೆಗೆ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದರು. ಇದೀಗ, ರಾಮಮಂದಿರದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.