ಇಸ್ಲಾಮಾಬಾದ್: ಬಲೂಚಿಸ್ತಾನದ ಮೇಲೆ ಇರಾನ್ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದ ಮರುದಿನವೇ ಅದಕ್ಕೆ ಪ್ರತಿಯಾಗಿ ಇದೀಗ ಪಾಕಿಸ್ತಾನ ಕೂಡ ಇರಾನ್ ಮೇಲೆ ದಾಳಿ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ.
ಇರಾನ್‌ನ ಸರಾವನ್ ನಗರದಲ್ಲಿ ಸರಣಿ ಸ್ಫೋಟಗಳು ಉಂಟಾಗಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ. ಇವರು ಇರಾನ್ ನಾಗರಿಕರಲ್ಲ ಎಂದು ಐಆರ್‌ಎನ್‌ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಡಿ ಭಾಗದಲ್ಲಿರುವ ಬಲೂಚಿಸ್ತಾನದ ಉಗ್ರರ ನೆಲೆಗಳ ಮೇಲೆ ಇರಾನ್ ಮಂಗಳವಾರ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತ್ತು. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮೂವರು ಹೆಣ್ಣುಮಕ್ಕಳಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನ ತಿಳಿಸಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಶನ್; ದೊಡ್ಮನೆಯಿಂದ ಬೆಂಕಿ ತನಿಷಾ ಔಟ್
“ನಮ್ಮ ದೇಶದ ಭದ್ರತೆ ವಿರುದ್ಧ ಆಕ್ರಮಣಕ್ಕೆ ಉತ್ತರವಾಗಿ ಇರಾನ್ ತೆಗೆದುಕೊಂಡ ಮತ್ತೊಂದು ನಿರ್ಣಾಯಕ ಹೆಜ್ಜೆ”ಎಂದು ಇರಾನ್ ಹೇಳಿಕೊಂಡಿತ್ತು
Pakistan’s territorial integrity and the well-being of our citizens are paramount. Pakistan has taken fitting diplomatic and military steps for peace and security. We seek peace between our two neighbourly countries but reserve the right to defend ourselves. The nation salutes…
— Shehbaz Sharif (@CMShehbaz) January 18, 2024
ಬಲೂಚಿಸ್ತಾನದಲ್ಲಿನ ಜೈಶ್ ಉಲ್ ಅದಲ್ ಉಗ್ರ ಸಂಘಟನೆಯ ಕೇಂದ್ರ ಕಚೇರಿಯ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದ ಇರಾನ್‌ಗೆ, ಪಾಕಿಸ್ತಾನ ಗಂಭೀರ ಪರಿಣಾಮದ ಎಚ್ಚರಿಕೆ ನೀಡಿತ್ತು.
ಈ ದಾಳಿ ತನ್ನ ವಾಯುಸೀಮೆ ಹಾಗೂ ಸಾರ್ವಭೌಮತೆಯ ಉಲ್ಲಂಘನೆ ಎಂದು ಪಾಕಿಸ್ತಾನ ಹೇಳಿತ್ತು. ಈ ಕಾನೂನುಬಾಹಿರ ಕೃತ್ಯಕ್ಕೆ ತಿರುಗೇಟು ನೀಡುವ ಅಧಿಕಾರವೂ ತನಗಿದೆ ಎಂದು ಹೇಳಿತ್ತು.
ರಾಯಭಾರಿ ಮೇಲೆ ನಿರ್ಬಂಧ
ಈ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ, ಇರಾನ್‌ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಸಿಕೊಂಡು ಪ್ರತಿಭಟನೆ ನಡೆಸಿದೆ. ಜತೆಗೆ ಇರಾನ್ ರಾಯಭಾರಿ ಪಾಕಿಸ್ತಾನಕ್ಕೆ ಮರಳದಂತೆ ನಿರ್ಬಂಧ ವಿಧಿಸುವಂತಹ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ.
ಜೈಶ್ ಉಲ್ ಅದಲ್ ಅಥವಾ ‘ಆರ್ಮಿ ಆಫ್ ಜಸ್ಟೀಸ್’ ಹೆಸರಿನ ಸಂಘಟನೆಯು ಸುನ್ನಿ ಉಗ್ರರ ಗುಂಪಾಗಿದ್ದು, 2012ರಲ್ಲಿ ಸ್ಥಾಪನೆಯಾಗಿದೆ. ಇದು ಪಾಕಿಸ್ತಾನ ಮತ್ತು ಇರಾನ್ ಗಡಿಯುದ್ದಕ್ಕೂ ವ್ಯಾಪಕವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ಇರಾನ್ ಉಗ್ರ ಸಂಘಟನೆ ಎಂದು ಕಪ್ಪು ಪಟ್ಟಿಗೆ ಸೇರಿಸಿದೆ. ಇರಾನ್ ನೆಲದಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ಸಂಘಟನೆ ಅನೇಕ ದಾಳಿಗಳನ್ನು ನಡೆಸಿದೆ.