ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಜವಾದ ಜಾತ್ಯಾತೀತರಾದರೆ ಜನವರಿ 22ರಂದು ರಜೆ ಘೋಷಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಜ.22ರಂದು ರಜೆ ಘೋಷಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಯ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಜೆ ಕೊಡುವ ಸದ್ಬುದ್ದಿಯನ್ನು ಪ್ರಭು ಶ್ರೀರಾಮ ಚಂದ್ರ ನೀಡಲಿ ಎಂದು ಕುಟುಕಿದ್ದಾರೆ.
ಹಿಂದೂಗಳ ಭಾವನೆಗೆ ಅಪಮಾನ ಮಾಡುವ ಸರ್ಕಾರ ರಾಜ್ಯದಲ್ಲಿದೆ. ಹಿಂದೂಗಳನ್ನು ಅಪಮಾನ ಮಾಡಿ ಮುಸ್ಲಿಂ ಮತ ಗಳಿಸುವ ಸರ್ಕಾರ ಇದು. ದೇಶದ ಪ್ರತಿಯೊಬ್ಬನ ಮನಸಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮ ಇದೆ. ನಂಬಿಕೆಗೆ ಅಪಮಾನ ಮಾಡುವುದು ಒಂದು ಸಂಘಟನೆಯ ನಾಶ ಸಂಕೇತ. ಒಂದೇ ಕೋಮಿನ ವ್ಯವಸ್ಥೆಯಿಂದ ಹೊರಗೆ ಬರಲು ಅವಕಾಶ ಇದೆ. ರಾಮ ಹಲವರಿಗೆ ಒಳ್ಳೆಯ ಬುದ್ದಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪೇಜಾವರ ಶ್ರೀ ನೇತೃತ್ವದಲ್ಲಿ ಹಿಂದುತ್ವ ಜಾಗೃತ
ರಾಮಮಂದಿರಕ್ಕೆ ಪೇಜಾವರ ಶ್ರಿಗಳೇ ಅಡಿಪಾಯ ಹಾಕಿದವರು. ಪೇಜಾವರ ಶ್ರೀಗಳ ನೇತೃತ್ವದಲ್ಲಿ ದೇಶದಲ್ಲಿ ಹಿಂದುತ್ವ ಜಾಗೃತವಾಯ್ತು. ಅಡ್ವಾಣಿ ಅಯೋಧ್ಯಾ ರಥ ಪ್ರಾರಂಭಿಸಲು ಇದುವೇ ಪ್ರೇರಣೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಪ್ರಧಾನಿ ಮೋದಿಯಿಂದ ಆಗಬೇಕೆಂಬ ಸಂಕಲ್ಪ ಇತ್ತು ಅಂತ ಅಡ್ವಾಣಿಯವರೇ ಹೇಳಿದ್ದಾರೆ. ಇಡೀ ದೇಶ ಜಾಗೃತವಾಗಲು ಕಾರಣ ಉಡುಪಿ ಪೇಜಾವರ ಮಠ. ಗುಲಾಮಗಿರಿಯ ಸಂಕೇತ ನಮ್ಮ ಕಣ್ಣಮುಂದೆಯೇ ಜಾರಿ ಬಿತ್ತು ಎಂದು ಯತ್ನಾಳ್ ವಿಶ್ಲೇಷಿಸಿದ್ದಾರೆ.