ಬೆಂಗಳೂರು : ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯು ಮುಂಬರುವ ಫೆಬ್ರುವರಿ 16ರಂದು ನಡೆಯಲಿದ್ದು, ಆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರ ಸಭೆ, ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ನಡೆಸಲಾಯಿತು.
ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಕಣಕ್ಕೆ ಇಳಿಯುತ್ತಿದ್ದು, ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಸಭೆಯಲ್ಲಿ ಹೆಚ್.ಎಂ.ರಮೇಶ್ ಗೌಡ ಕರೆ ನೀಡಿದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಡ್ರೈವರ್-ಕಂಡಕ್ಟರ್ ಕಾಮಿಡಿ ಪ್ರಸಂಗ; ವಿಡಿಯೋ ಫುಲ್ ವೈರಲ್
ಅಲ್ಲದೆ, ಮಿತ್ರಪಕ್ಷವಾದ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಕೆಲಸ ಮಾಡಬೇಕಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧ ಶಿಕ್ಷಕರು ರೋಸಿ ಹೋಗಿದ್ದಾರೆ. ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಸರ್ಕಾರದ ಅಸಡ್ಡೆ ಬಹಳ ಅಪಾಯಕಾರಿ ಆಗಿದೆ. ಈ ಎಲ್ಲಾ ಶಿಕ್ಷಕ ಬಂಧುಗಳ ಗಮನಕ್ಕೆ ತರಬೇಕು ಎಂದು ಇದೇ ವೇಳೆ ಪಕ್ಷದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಮಹಿಳಾ ಜೆಡಿಎಸ್ ಅಧ್ಯಕ್ಷೆ ಹಾಗೂ ಮಾಜಿ ಸಚಿವರಾದ ಲೀಲಾದೇವಿ ಆರ್ ಪ್ರಸಾದ್ ಅವರು ಮಾತನಾಡಿದರು.
ಈ ಸಭೆಯಲ್ಲಿ ಪಕ್ಷದ ಅಭ್ಯರ್ಥಿ ಎ.ಪಿ.ರಂಗನಾಥ್, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಹಿರಿಯ ಮುಖಂಡರಾದ ಮಂಜುನಾಥ್, ರಾಜ್ಯ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಸಯ್ಯದ್ ರೋಷನ್ ಅಬ್ಬಾಸ್, ಯುವ ಮುಖಂಡ ಪ್ರವೀಣ್ ಸೇರಿದಂತೆ ಹಲವಾರು ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.