ತುಮಕೂರು : ಅಯೋಧ್ಯೆ ರಾಮಮಂದಿರ ಕುರಿತು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಮನನ್ನು ಬೊಂಬೆಗೆ ಹೋಲಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಹೋಗಿದ್ದೆ. ಆಗ ಒಂದು ಟೆಂಟ್ನಲ್ಲಿ ಎರಡು ಬೊಂಬೆ ಇಟ್ಟು ಇದೇ ಶ್ರೀರಾಮ ಅಂತ ಹೇಳ್ತಿದ್ರು ಎಂದು ಟೀಕಿಸಿದ್ದಾರೆ.
ನಾವು ನಮ್ಮೂರಿನ ದೇವಸ್ಥಾನಕ್ಕೆ ಹೋದ್ರೆ ಅಲ್ಲಿ ಒಂಥರಾ ಕಂಪನ(ವೈಬ್ರೇಶ್ರನ್) ಭಕ್ತಿ ಬರುತ್ತೆ. ಅಲ್ಲಿ ಅವತ್ತು ನನಗೇನು ಅನಿಸ್ಲಿಲ್ಲ. ಟೂರಿಂಗ್ ಟಾಕೀಸ್ ಅಲ್ಲಿ ಬೊಂಬೆ ಇಟ್ಟಿದ್ದಾರೆ ಅನಿಸ್ತು. ಇವತ್ತು ಅಲ್ಲಿ ಏನು ಮಾಡವ್ರೆ ಗೊತ್ತಿಲ್ಲ, ನೋಡೋಣ ಮುಂದೆ ಅಲ್ಲಿಗೆ ಹೋಗಿ ಎಂದು ಕುಟುಕಿದ್ದಾರೆ.
ಚುನಾವಣೆಗಾಗಿ ರಾಮಮಂದಿರ ಕಟ್ಟಿಸಿದ್ದಾರೆ
ಜನರು ಭಾವನೆಗಳನ್ನ ಕೇಳ್ತಾರೆ ಅಂತ ಕೆಟ್ಟ ದಾರಿಗೆ ತೆಗೆದುಕೊಂಡು ಹೋಗಬಾರದು. ದೇವರು ಇದ್ದಾನೆ ಅಂದ್ರೆ ಇದ್ದಾನೆ, ಇಲ್ಲಾ ಅಂದ್ರೆ ಇಲ್ಲಾ ಅಷ್ಟೆ. ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರಲ್ಲ, ಇನ್ನೊಂದು ಐದಾರು ತಿಂಗಳು ಕಳೀಲಿ. ಏನೇನು ಬರುತ್ತೆ, ಹೋಗುತ್ತೆ ನೋಡಿ. ಎಲೆಕ್ಷನ್ ಗೋಸ್ಕರ ಶ್ರೀರಾಮನ ದೇವಸ್ಥಾನ ಕಟ್ಟಿಸಿದ್ದಾರೆ. ಆ ಮೂಲಕ ಜನರಿಗೆ ಮೋಸ ಮಾಡ್ತಿದ್ದಾರೆ. ಈಗ ಅದು ಬಿಜೆಪಿ ಶ್ರೀರಾಮನೋ..? ಮೋದಿ ಶ್ರೀರಾಮನೋ..? ನೋಡೋಣ ಅದೇನಾಗುತ್ತೋ.. ಎಂದು ಬಿಜೆಪಿ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.