ಬೆಂಗಳೂರು : ದೆಹಲಿಗೆ ಹೋಗಿದ್ದೆ, ಹಿರಿಯ ನಾಯಕರ ಭೇಟಿ ಮಾಡಿ ಬಂದೆ. ರಾಜ್ಯಸಭೆ ಕೇಳಿದ್ದೇನೆ, ಮಗನಿಗೆ ಏನೂ ಕೇಳಿಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರ ಕುಟುಂಬ ಬಡವರಾಗಿ ಉಳಿಯಬಾರದು ಅಂತ ಕೆಲಸ ಮಾಡಿದ್ದೆ. ಅದು ಬೇರೆ ರೀತಿ ನೆರವಾಗುತ್ತೆ ಅನ್ನೋದು ದೆಹಲಿ ಪ್ರವಾಸದಲ್ಲಿ ಕಂಡುಬಂತು ಎಂದು ತಿಳಿಸಿದರು.
ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾರನ್ನು ಭೇಟಿ ಮಾಡಿದೆ. ಅವರ ಅಂತರಾಳದ ಮಾತು ಕೇಳಿದೆ. ರಾಷ್ಟ್ರೀಯ ನಾಯಕರ ಅಂತರಾಳದಲ್ಲಿ ಇಷ್ಟು ಒಳ್ಳೆಯ ಮನಸ್ಸಿದೆ ಅನ್ನೋದು ತಿಳೀತು. ರಾಷ್ಟ್ರಕ್ಕೆ ಮೋದಿ ಅವರ ಅವಶ್ಯಕತೆ ಇದೆ. ಕೆಲಸ ಮಾಡಿ ಮುಂದೆ ತೀರ್ಮಾನ ಮಾಡ್ತೀವಿ ಅಂದಿದ್ದಾರೆ ಎಂದು ಹೇಳಿದರು.
ನನಗೆ 73 ವರ್ಷ ಆರೋಗ್ಯವಾಗಿದ್ದೇನೆ
28 ಲೋಕಸಭಾ ಕ್ಷೇತ್ರದಲ್ಲಿನ ಎಲ್ಲಾ ವಿವರ ನೀಡಿದೆ. 28 ಕ್ಷೇತ್ರದ ಬಗ್ಗೆ ಹೇಳ್ತಿದ್ದಂತೆ ನಿಮಗೆ ಏನಾಗಬೇಕು ಅಂತ ಕೇಳಿದ್ರು. ನಾನು ರಾಜ್ಯಸಭೆ ಕೇಳಿದೆ. ನಾನು 5ರಿಂದ 10 ನಿಮಿಷ ಚರ್ಚೆಗೆ ಅವಕಾಶ ಕೇಳಿದೆ. ಅವರು ಅರ್ಧ ಗಂಟೆ ಸಮಯ ಕೊಟ್ರು. ನನಗೆ 73 ವರ್ಷ ಆರೋಗ್ಯವಾಗಿದ್ದೇನೆ. ಯಾವುದಾದ್ರೂ ಮೂರು ಲೋಕಸಭಾ ಕ್ಷೇತ್ರಕೊಡಿ ಗೆಲ್ಲಿಸಿಕೊಂಡು ಬರ್ತೀನಿ ಅಂದೆ. ಮಗನಿಗೆ ಏನೂ ಕೇಳಿಲ್ಲ, ಈ ಕ್ಷೇತ್ರದಲ್ಲಿ ನನ್ನದೇ ಆದ ಕೊಡುಗೆ ಇದೆ ಎಂದು ವಿ. ಸೋಮಣ್ಣ ಮಾಹಿತಿ ನೀಡಿದರು.