ಬೆಂಗಳೂರು : ಪ್ರಸಿದ್ಧ ಗುಹಾಂತರ ದೇವಾಲಯಗಳಲ್ಲೊಂದಾದ ದಕ್ಷಿಣಾಭಿಮುಖವಾಗಿರುವ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದೊಳಗಿನ ಶಿವನ ವಿಗ್ರಹಕ್ಕೆ (ಶಿವಲಿಂಗ) ಸೂರ್ಯ ರಶ್ಮಿ ಸ್ಪರ್ಶವಾಗಿದೆ.
ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಲಿವ ವೇಳೆ ಈ ಅದ್ಬುತ ವಿಸ್ಮಯವನ್ನು ಭಕ್ತಸಾಗರ ಕಣ್ತುಂಬಿ ಕೊಂಡಿತು. ಈ ಕೌತುಕವನ್ನು ಭಕ್ತರು ಕಣ್ತುಂಬಿಕೊಳ್ಳಲು ದೇಗುಲದ ಹೊರಗೆ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿತ್ತು.
ಸುಮಾರು 30 ರಿಂದ 40 ಸೆಕೆಂಡ್ ಮಾತ್ರ ಸೂರ್ಯನ ರಶ್ಮಿಯು ಲಿಂಗದ ಮೇಲೆ ಬಿದ್ದು ಹಾದು ಹೋಯಿತು. ಸೂರ್ಯನ ರಶ್ಮಿ ಲಿಂಗದ ಮೇಲೆ ಬೀಳುತ್ತಿದ್ದಂತೆಯೇ ಗಂಗಾಧರೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬಳಿಕ ಗಂಗಾಧರ ಸ್ವಾಮಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಶಿವಲಿಂಗಕ್ಕೆ ನಮಿಸಿದ ಸೂರ್ಯ
ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಮಾತನಾಡಿ, ಸಾಮಾನ್ಯವಾಗಿ ಶಿವಾಲಯಗಳು ಪೂರ್ವ, ಪಶ್ಚಿಮಾಭಿಮುಖವಾಗಿರುತ್ತವೆ. ಈ ದೇವಾಲಯ ದಕ್ಷಿಣಾಭಿಮುಖವಾಗಿದೆ. ಸಂಕ್ರಾಂತಿ ದಿನದಂದು ಶಿವಲಿಂಗಕ್ಕೆ ಸೂರ್ಯ ನಮಿಸುತ್ತಾನೆ ಎಂದು ಹೇಳಿದ್ದಾರೆ.