Monday, December 23, 2024

Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ

ಸೂರ್ಯ ತನ್ನ ಪಥವನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸುತ್ತೇವೆ.

ಮಕರ ಸಂಕ್ರಾಂತಿಯ ಇನ್ನೊಂದು ಹೆಸರು ಉತ್ತರಾಯಣ ಪುಣ್ಯಕಾಲ. ಇಡೀ ಉತ್ತರಾಯಣವೇ ದೇವತೆಗಳಿಗೆ ಪ್ರಿಯವಾದದ್ದು. ದೇವಕಾರ್ಯ, ಶುಭ ಕಾರ್ಯಗಳಿಗೆ ಈ ದಿನ ಬಹಳ ಪ್ರಾಶಸ್ತ್ಯವಾಗಿದೆ. ಇಂತಹ ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಮಕರ ಸಂಕ್ರಾಂತಿಗೆ ವಿಶೇಷವಾದ ಮಾನ್ಯತೆಯಿದೆ. ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.

ನಾನಾ ಹೆಸರುಗಳಲ್ಲಿ ಸಂಕ್ರಾಂತಿ ಆಚರಣೆ 

ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಸಂಭ್ರಮಿಸಲಾಗುತ್ತದೆ.

ಸಂಕ್ರಾಂತಿ ಹಬ್ಬದ ಆಚರಣೆ ಹೇಗೆ..?

ಹಬ್ಬದಲ್ಲಿ ಬಣ್ಣಬಣ್ಣದ ಅಲಂಕಾರಗಳು, ಹಾಡುಗಾರಿಕೆ ಮತ್ತು ನೃತ್ಯ, ಗಾಳಿಪಟ ಹಾರಿಸುವುದು, ದೀಪೋತ್ಸವಗಳು, ರಂಗೋಲಿ ಬಿಡಿಸುವುದನ್ನು ಕಾಣಬಹುದಾಗಿದೆ. ಕರ್ನಾಟಕದ ಮತ್ತೊಂದು ಹಳೆಯ ಆಚರಣೆಯೆಂದರೆ, ಜನರು ತಮ್ಮ ಹಸು ಮತ್ತು ದನಗಳನ್ನು ಹೊಳೆಯುವ ವೇಷಭೂಷಣಗಳು ಮತ್ತು ಆಭರಣಗಳಿಂದ ಅಲಂಕರಿಸುತ್ತಾರೆ.

ಮಕರ ಸಂಕ್ರಾಂತಿ ಅರ್ಥ: ಮಕರ ಸಂಕ್ರಾಂತಿ ಎಂದರೆ ಮಕರ ಎಂಬುದು ಒಂದು ರಾಶಿ. ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಸೂರ್ಯ ದೇವನ ಚಲನೆ ಎಂಬ ಅರ್ಥವನ್ನು ಕೊಡುತ್ತದೆ. ಸೂರ್ಯ ಧನೂರಾಶಿಯಿಂದ ಮಕರ ರಾಶಿಯತ್ತ ಚಲಿಸುತ್ತಾನೆ. ಸಂಕ್ರಾಂತಿಯನ್ನು ಸರಳವಾಗಿ ಹೇಳುವುದಾದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದೆಂದು ಅರ್ಥ.

ಎಳ್ಳಿಗೆ ಮಹತ್ವ ಯಾಕೆ?
ಸಂಕ್ರಾಂತಿ ದಿನದಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳುದಾನ ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗೆಯೇ ದೇವಾಲಯಗಳಲ್ಲಿ ಎಳ್ಳೆಣ್ಣೆ ಹಾಕಿ ದೀಪ ಬೆಳಗಬೇಕು. ಈ ದಿನ ನಾವು ಮಾಡಿದ ದಾನ ಧರ್ಮಗಳ ಪುಣ್ಯವು ಜನ್ಮ ಜನ್ಮದಲ್ಲೂ ಸದಾ ನಮಗೆ ಶ್ರೇಯಸ್ಸು ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂದು ಹಿರಿಯರು ಹೇಳುತ್ತಾರೆ. `ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಕನ್ನಡದ ಗಾದೆಗೆ ಸಂಕ್ರಾಂತಿ ಹಬ್ಬವೇ ಮೂಲವಾಗಿರುವುದು ಎಂದು ಹಲವರು ಹೇಳುತ್ತಾರೆ.

 

RELATED ARTICLES

Related Articles

TRENDING ARTICLES