Monday, May 13, 2024

ವೃದ್ಯಾಪ್ಯ, ವಿಧವಾ ವೇತನ ಸಕಾಲಕ್ಕೆ ಬಿಡುಗಡೆ ಮಾಡಿ: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ನೀಡುವ ಭರದಲ್ಲಿ ಇತರೆ ವರ್ಗಗಳನ್ನು ಮರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಕ್ಸಮರ ಮಾಡಿದ್ದಾರೆ.

ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಅವರು, ಸರ್ಕಾರಕ್ಕೆ ಜನರ ಪರ ಮನವಿ  ಮಾಡಿಕೊಂಡಿದ್ದಾರೆ.

ವೃದ್ಧ ಮತ್ತು ದಿವ್ಯಾಂಗ ಅಜ್ಜಿಯೊಬ್ಬರು ತೆವಳಿಕೊಂಡು ಹೋಗುತ್ತಿರುವ ವಿಡಿಯೋ ಹಂಚಿಕೊಂಡಿರುವ ಹೆಚ್‌. ಡಿ ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಸರ್ಕಾರದವರು ಗ್ಯಾರೆಂಟಿಗಳನ್ನು ಕೊಟ್ಟು ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಹಸನು ಮಾಡುವ ಮಾತು ಒಳ್ಳೆಯದೇ. ಆದರೆ, ಜನಜೀವನ ಹೇಗೆ ಹಳಿ ತಪ್ಪುತ್ತಿದೆ ಎನ್ನುತ್ತಿರುವುದಕ್ಕೆ ಈ ದೃಶ್ಯವೇ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಮಾಶಾಸನಕ್ಕಾಗಿ 5 ಕಿ.ಮೀ.ತೆವಳಿಕೊಂಡು ಬಂದ ಅಜ್ಜಿ

ಮಾಶಾಸನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ಈ ಅಜ್ಜಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ. ಆ ಅಜ್ಜಿ ಅನುಭವಿಸಿರುವ ಯಾತನೆ ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ ಹಾಗೂ ಸರ್ಕಾರದ ಕ್ಷಮತೆಯನ್ನೂ ಪ್ರಶ್ನಿಸಿದೆ.

ಈ ಅಜ್ಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದವರು. ರಸ್ತೆಯ ಬದಿಯಲ್ಲಿ ತೆವಳಿಕೊಂಡು ಸಾಗಿದ ಅಜ್ಜಿಯ ದುಸ್ಥಿತಿಯನ್ನು ಕಂಡು ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಕ್ಕೆ ಕನಿಕರ ಇಲ್ಲವೇ?

ನಾನು ಮುಖ್ಯಮಂತ್ರಿ ಆಗಿದ್ದಾಗ ವೃದ್ಧರು, ವಿಕಲಚೇತನರು, ವಿಧವೆಯರು, ದೇವದಾಸಿಯರು ಸೇರಿ ಸಮಾಜದ ವಿವಿಧ ದುರ್ಬಲ ಜನರಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು, ಅವರ ಆರ್ಥಿಕ ಸಬಲೀಕರಣಕ್ಕೆ ಕ್ರಮ ವಹಿಸಿದ್ದೆ. ವೃದ್ದಾಪ್ಯ ವೇತನ ವಿಕಲಚೇತನರ ಮಾಶಾಸನವನ್ನು ಏರಿಕೆ ಮಾಡಿದ್ದೆ. ಕಷ್ಟದಲ್ಲಿರುವವರಿಗೆ ಆಸರೆ ಕೊಡುವುದು ಆಡಳಿತ ನಡೆಸುವವರ ಕರ್ತವ್ಯ. ಗೃಹಲಕ್ಷ್ಮಿಯರಿಗೆ ₹2000 ಕೊಡುತ್ತೀರಿ ಸರಿ, ಆದರೆ ಇಂತಹ ಅಸಂಖ್ಯಾತ ವೃದ್ಧ ಅಮ್ಮಂದಿರ ಪರಿಸ್ಥಿತಿ ಏನು? ಸರಕಾರಕ್ಕೆ ಕನಿಕರ ಎನ್ನುವುದು ಇಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ, ಸಂತೋಷ. ಆದರೆ; ಬಡ, ಅಶಕ್ತ ಮಹಿಳೆಯರಿಗೆ ನೆರವಾಗುವ ವೃದ್ಯಾಪ್ಯ ವೇತನ, ವಿಧವಾ ವೇತನವನ್ನು ಸಕಾಲಕ್ಕೆ ಮತ್ತು ನಿಯಮಿತವಾಗಿ ಬಿಡುಗಡೆ ಮಾಡಬೇಕು ಎಂದು ಹೆಚ್‌ಡಿಕೆ ಆಗ್ರಹಿಸಿದ್ದಾರೆ.

ಮಾಶಾಸನಕ್ಕಾಗಿ ಈ ಅಜ್ಜಿ 5 ಕಿ.ಮೀ. ತೆವಳಿಕೊಂಡು ಬಂದ ದೃಶ್ಯಗಳು ಪುನರಾವರ್ತನೆ ಆಗಬಾರದು. ಅವರಿಗೆ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

 

 

 

 

RELATED ARTICLES

Related Articles

TRENDING ARTICLES