ಉತ್ತರ ಕನ್ನಡ : ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ ಎನಿಸಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ಪುರಾಣ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಯು ಮಾರ್ಚ್ 19ರಿಂದ ಆರಂಭವಾಗಲಿದ್ದು, ಮಾರ್ಚ್ 27ರ ವರೆಗೆ ವೈಭವದಿಂದ ನಡೆಯಲಿದೆ ಎಂದು ಗೋಪಾಲಕೃಷ್ಣ ದೇವಾಲಯದ ಅರ್ಚಕ ಶರಣ ಆಚಾರ್ಯ ಘೋಷಿಸಿದ್ದಾರೆ.
ಜಾತ್ರೆಯ ದಿನಾಂಕ ನಿಗದಿ ಮಾಡುತ್ತಿದ್ದಂತೆಯೇ ಅಜಯ ನಾಡಿಗ ಮುಹೂರ್ತ ದೀಪ ಬೆಳಗಿಸಿದರು. ಜಾತ್ರಾ ಪೂರ್ವ ವಿಧಿ ವಿಧಾನಗಳು ಜನವರಿ 31 ರಿಂದ ನಡೆಯಲಿದೆ. ಮಾರ್ಚ್ 19 ರಂದು ದೇವಿಯ ರಥದ ಕಲಶ ಪ್ರತಿಷ್ಠೆ, ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾರ್ಚ್ 20 ರಂದು ಮಾರಿಕಾಂಬಾ ದೇವಿಯ ಅದ್ದೂರಿ ರಥೋತ್ಸವ ನಡೆಯಲಿದೆ.
ಮಾ.27 ರಂದು ಜಾತ್ರಾ ವಿಧಿ ವಿಧಾನ ಮುಕ್ತಾಯ
ಮಾರ್ಚ್ 21 ರಂದು ಜಾತ್ರಾ ಗದ್ದುಗೆಯಲ್ಲಿ ದೇವಿಯ ಪ್ರತಿಷ್ಠಾಪನೆಯಾಗಲಿದ್ದು, ಸೇವೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಒಟ್ಟು ಎಂಟು ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರಲಿದ್ದು, ಇದೇ ವೇಳೆ ಹರಕೆ ಸೇವೆ ಸಲ್ಲಿಸಲಾಗುತ್ತದೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದಲೂ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಮಾರ್ಚ್ 27 ರಂದು ಜಾತ್ರಾ ವಿಧಿ ವಿಧಾನಗಳು ಮುಕ್ತಾಯಗೊಳ್ಳಲಿದೆ.