ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ಆಲ್ರೌಂಡರ್ ಶಿವಂ ದುಬೆ ಮತ್ತೆ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್ಗೆ ಬಂದ ಶಿವಂ ದುಬೆ ಅಫ್ಘಾನ್ ಬೌಲರ್ಗಳನ್ನು ಬೆಂಡೆತ್ತಿದರು.
ಯಶಸ್ವಿ ಜೈಸ್ವಾಲ್ ಜೊತೆಗೂಡಿ ತಂಡಕ್ಕೆ ಆಸರೆಯಾದರು. ಅದರಲ್ಲೂ ಮೊಹಮ್ಮದ್ ನಬಿ ಎಸೆದ 10ನೇ ಓವರ್ನಲ್ಲಿ ದುಬೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಈ ಓವರ್ನಲ್ಲಿ 3 ಸಿಕ್ಸರ್ನೊಂದಿಗೆ 21 ರನ್ ಚಚ್ಚಿದರು. ಇನ್ನೂ ಮುಜೀಬ್ ಎಸೆದ ಐದನೇ ಓವರ್ನಲ್ಲಿ ಯಶಸ್ವಿ ಜೈಸ್ವಾಲ್ ಹ್ಯಾಟ್ರಿಕ್ ಬೌಂಡರಿ ಸಿಡಿಸಿದರು. ಈ ಓವರ್ನಲ್ಲಿ 4 ಬೌಂಡರಿ ನೆರವಿನೊಂದಿಗೆ 19 ರನ್ ಬಂದವು.
ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಇಬ್ಬರೂ ಆಸರೆಯಾದರು. ಯಶಸ್ವಿ ಜೈಸ್ವಾಲ್ ಕೇವಲ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನೊಂದಿಗೆ ಅರ್ಧಶತಕ (50) ಸಿಡಿಸಿದರು. ಶುಭ್ಮನ್ ಗಿಲ್ ಬದಲಿಗೆ ಕಣಕ್ಕಿಳಿದ ಜೈಸ್ವಾಲ್, ತನ್ನ ಆಟದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸಿದರು.
ಮತ್ತೆ ಘರ್ಜಿಸಿದ ದುಬೆ
ಇನ್ನೂ ಜೈಸ್ವಾಲ್ಗೆ ಸಾಥ್ ನೀಡಿದ ಶಿವಂ ದುಬೆ 22 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನೊಂದಿಗೆ ಆಕರ್ಷಕ ಅರ್ಧಶತಕ ಸಿಡಿಸಿದರು. ಈ ಸರಣಿಯಲ್ಲಿ ದುಬೆ ಸಿಡಿಸಿದ ಎರಡನೇ ಅರ್ಧಶತಕ ಇದಾಗಿದೆ.