ಹಾವೇರಿ : ಮಹಿಳೆಯರಿಗೆ ರಕ್ಷಣೆ ಇಲ್ಲ ಅಂದ್ರೆ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಯಾಕೆ ಇರಬೇಕು? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಕೆಂಡಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯರ ಮಾತಿನ ಆರಂಭ ಮತ್ತು ಮುಕ್ತಾಯ ಅಲ್ಪಸಂಖ್ಯಾತರ ತುಷ್ಟೀಕರಣದೊಂದಿಗೆ ಇರುತ್ತದೆ. ಕಾಂಗ್ರೆಸ್ ಪಕ್ಷದವರು ಅಲ್ಪಸಂಖ್ಯಾತರ ಬಗ್ಗೆ ಉದ್ದುದ್ದ ಭಾಷಣ ಮಾಡ್ತಾರೆ. ಇತ್ತಿಚೆಗೆ ಹಾವೇರಿಯಲ್ಲಿ ನಡೆದ ಘಟನೆ ಪ್ರತಿಯೊಬ್ಬರೂ ತಲೆ ತಗ್ಗಿಸುವಂತದ್ದು. ದುರಂತ ಅಂದ್ರೆ ಘಟನೆ ನಡೆದು ಒಂದು ವಾರ ಕಳೆದರೂ ಎಫ್ಐಆರ್ ಆಗಿಲ್ಲ ಎಂದು ಗುಡುಗಿದ್ದಾರೆ.
ಆ ಮಹಿಳೆಯನ್ನು ಯಾರು ಮಾತನಾಡಿಸಿಲ್ಲ
ಆ ಮಹಿಳೆಯನ್ನು ಯಾರು ಮಾತನಾಡಿಸೋಕೆ ಹೋಗುವುದಿಲ್ಲ . ಘಟನೆ ಬೆಳಕಿಗೆ ಬಂದ ಮೇಲೆ ಎಫ್ಐಆರ್ ಮಾಡಿದ್ದಾರೆ. ನಾನು ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತೇನೆ. ರಾಜ್ಯ ಸರ್ಕಾರ ಇಂತಹ ದೊಡ್ಡ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದನ್ನು ಜನ ಗಮನಿಸಿದ್ದಾರೆ. ದುರ್ಘಟನೆ ನಂತರ ಹಣ ಕೊಟ್ಟು ಸಮಾಧಾನ ಮಾಡಲು ಮುಂದಾಗಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಿಮ್ಮನ್ನು ಆ ಭಗವಂತನೆ ಕಾಪಾಡಬೇಕು
ಪ್ರತಿಯೊಬ್ಬರೂ ತಲೆತಗ್ಗಿಸುವ ಘಟನೆಯಲ್ಲಿ ಪೊಲೀಸರು ಸರ್ಕಾರದ ಜೊತೆ ಈ ಮಟ್ಟಕ್ಕೆ ಇಳಿದಿದ್ದಾರೆಂದರೆ ಆ ಭಗವಂತನೆ ಕಾಪಾಡಬೇಕು. ಕೇಸ್ ಹೊರಗೆ ಬರಲು ಬಿಟ್ಟಿಲ್ಲ, ಮಾಧ್ಯಮ ಮೂಲಕ ಅದು ಗೊತ್ತಾಗಿದೆ. ಘಟನೆ ಮುಚ್ಚಿಹಾಕಲು ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ. ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ ಪೊಲೀಸ್ ವರ್ತನೆ ಖಂಡನೀಯ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.