Tuesday, December 3, 2024

ಪ್ರೀತಿಸುವಂತೆ ಯುವತಿಗೆ ನಿರಂತರ ಕಿರುಕುಳ, ಮನನೊಂದು ಯುವತಿ ಆತ್ಮಹತ್ಯೆ!

ಹಾಸನ: ಪ್ರೀತಿಸುವಂತೆ ಯುವತಿಯೊಬ್ಬಳಿಗೆ ನಿರಂತರ ಕಿರುಕುಳ ನೀಡಿ ಜನರ ಎದುರೇ ಯುವಕನೊಬ್ಬ ಅವಮಾನ ಮಾಡಿದ ಪರಿಣಾಮ ಮನನೊಂದು ಯುವತಿ ನೇಣಿಗೆ ಶರಣಾದ ಘಟನೆ ಬೇಲೂರಿನ ನಿಡಗೂಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸಂಗೀತಾ (21) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಅದೇ ಗ್ರಾಮದ ಶಿವು ಎಂಬಾತ ಸಂಗೀತಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೇ ತನಗೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಸಂಗೀತಾ ಪೋಷಕರಲ್ಲಿ ಕೇಳಿದ್ದ. ಇದಕ್ಕೆ ಸಂಗೀತಾ ಮನೆಯವರು ಈಗಲೇ ಮದುವೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಇಷ್ಟಾದರೂ ಶಿವು, ಸಂಗೀತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕ್ಯಾಪ್ಟನ್‌ ಮಿಲ್ಲರ್‌ ವಿಮರ್ಶೆ: ಕ್ರಾಂತಿಕಾರಿ ಕಥೆಗೆ ಜೀವ ತುಂಬಿದ ಧನುಷ್‌; ಅತಿಥಿ ಪಾತ್ರದಲ್ಲಿ ಅಬ್ಬರಿಸಿದ ಶಿವಣ್ಣ

ಜ.11 ರಂದು ಬೇಲೂರಿನ ಅಯ್ಯಪ್ಪಸ್ವಾಮಿ ದೆವಸ್ಥಾನಕ್ಕೆ ಸಂಗೀತಾ ಹೋಗಿದ್ದಳು. ಈ ವೇಳೆ ಅಲ್ಲಿಗೆ ಬಂದ ಶಿವು, ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಫೋನ್ ಮಾಡಿದರೂ ಏಕೆ ರಿಸೀವ್ ಮಾಡುವುದಿಲ್ಲ ಎಂದು ತಲೆಗೆ ಹೊಡೆದಿದ್ದಾನೆ. ನಂತರ ನನ್ನನ್ನು ಪ್ರೀತಿ ಮಾಡುವುದಿಲ್ಲವೆಂದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಸಿ, ನನ್ನನ್ನು ಮದುವೆಯಾಗಲಿಲ್ಲ ಎಂದರೆ ನೀನು ಸತ್ತು ಹೋಗು ಎಂದು ಜನರ ಎದುರೇ ಅವಮಾನ ಮಾಡಿದ್ದ. ಇದೇ ನೋವಿನಿಂದ ಸಂಗೀತಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಶಿವು ವಿರುದ್ಧ ಕಾನೂನು ಕ್ರಮಕ್ಕೆ ಮೃತಳ ಪೋಷಕರು ಆಗ್ರಹಿಸಿದ್ದಾರೆ. ಈ ಸಂಬಂಧ ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES