ಹಾಸನ : ತಮ್ಮ ಕುಟುಂಬದ ವಿರುದ್ಧ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಪ್ರತಿಭಟನೆ ಮಾಡುತ್ತಿರುವ ವಿಚಾರ ಕುರಿತು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಪೂರ್ವಾಗ್ರಹ ಪೀಡಿತರಾಗಿ ಮಾತನಾಡಿದ್ದಾರೆ. ದಾಖಲಾತಿ ಸರಿಯಾಗಿ ಪರಿಶೀಲನೆ ಮಾಡದೇ ಒಬ್ಬರ ಜೀವನದಲ್ಲಿ ಅಪವಾದ ಹೊರಡಿಸುವುದು ದುರಾದೃಷ್ಟಕರ ಎಂದು ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುತ್ತೆ. ನಮ್ಮ ಮಾಜಿ ಶಾಸಕರು ರಾಜಕೀಯ ಲಾಭ ಪಡೆಯಲು ಹೀಗೆ ಮಾಡ್ತಿದ್ದಾರೆ. ಹುರುಳಿಲ್ಲದ ವಿಷಯದಲ್ಲಿ ಮೂಗು ತೂರಿಸುತ್ತಿರೋದು ದುರಾದೃಷ್ಟಕರ. ರಾಜ್ಯದ ಕಾಂಗ್ರೆಸ್ ನಾಯಕರು ಕೆಂದ್ರದ ನಾಯಕರನ್ನ ಮೆಚ್ಚಿಸಲು ಈ ರೀತಿ ಮಾಡುತ್ತಿದ್ದಾರೆ. ನಮ್ಮ ಕುಟುಂಬ ಎಲ್ಲಾ ರೀತಿಯ ತನಿಖೆ ಎದುರಿಸಿದೆ. ಒಂದು ವರ್ಷದಿಂದ ಏನೇನು ಆಗಿದೆ ಎಂಬುದನ್ನ ತನಿಖೆ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸೇರಲು ಆಸೆ ಇತ್ತು
ರಾಮಸ್ವಾಮಿಗೆ ಕಾಂಗ್ರೆಸ್ ಸೇರಲು ಆಸೆ ಇತ್ತು. ಯಾಕೆ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ ಎಂಬುದು ನನಗೆ ಗೊತ್ತು. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ದೇವೇಗೌಡರ ಕುಟುಂಬವನ್ನ ಬೈದರೆ ಕೆಲವರಿಗೆ ಅಧಿಕಾರ ಸಿಗುತ್ತೆ ಎಂಬುದು ಕೆಲವರಿಗೆ ಗೊತ್ತು. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಹೀಗೆ ಮಾತನಾಡುತ್ತಾರೆ ಎಂದು ರೇವಣ್ಣ ಚಾಟಿ ಬೀಸಿದ್ದಾರೆ.