Sunday, December 22, 2024

ಅತೃಪ್ತ ಶಾಸಕರಿಗೆ ಗೂಟದ ಕಾರು ನೀಡಲು ಗ್ಯಾರಂಟಿ ಸಮಿತಿ : ಆರ್.ಅಶೋಕ್

ಬೆಂಗಳೂರು: ಗ್ಯಾರಂಟಿಗಳ ಅನುಷ್ಠಾನಕ್ಕಾಗಿ 3 ಹಂತಗಳಲ್ಲಿ ಕಾರ್ಯಕರ್ತರ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ‘ಗ್ಯಾರಂಟಿ ಜಾರಿ ಸಮಿತಿ ಅಲ್ಲ ಅತೃಪ್ತ ಶಾಸಕರಿಗೆ ಗೂಟದ ಕಾರು ಗ್ಯಾರಂಟಿ ನೀಡುವ ಸಮಿತಿ’ ಎಂದು ಟೀಕಿಸಿದ್ದಾರೆ. “ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ” ಎಂಬ ಗಾದೆ ಮಾತಿನಂತೆ ಈಗಾಗಲೇ ಅವೈಜ್ಞಾನಿಕ ಗ್ಯಾರಂಟಿಗಳ ಭಾರವನ್ನು ಹೊರಲಾಗದೆ ಬೆನ್ನು ಮೂಳೆ ಮುರಿದಂತಾಗಿರುವ ಸರ್ಕಾರಕ್ಕೆ ಗ್ಯಾರೆಂಟಿ ಜಾರಿ ಸಮಿತಿ ಎಂಬ ಮತ್ತೊಂದು ಹೊರೆ ಹೊರಿಸಲು ಸಿಎಂ ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಜಾರಿಗೆ ಮುಖ್ಯಮಂತ್ರಿ ಸಹಿತ, 34 ಕ್ಯಾಬಿನೆಟ್ ಸಚಿವರು, ಆರ್ಥಿಕ, ರಾಜಕೀಯ, ಮಾಧ್ಯಮ ಸಲಹೆಗಾರರು, ಜಿಲ್ಲಾಡಳಿತಗಳು ಸೇರಿದಂತೆ ಇಡೀ ಆಡಳಿತ ಯಂತ್ರವೇ ಇರುವಾಗ ಪ್ರತ್ಯೇಕ ಸಮಿತಿಯ ಅಗತ್ಯ ಏನಿದೆ? ಸಂಪುಟ ದರ್ಜೆ ಸ್ಥಾನಮಾನದ ಅಧ್ಯಕ್ಷರು, ರಾಜ್ಯ ಸಚಿವ ಸ್ಥಾನಮಾನದ ಐವರು ಉಪಾಧ್ಯಕ್ಷರು ಸೇರಿದಂತೆ 31 ಸದಸ್ಯರ ಸಮಿತಿಯ ಸಂಬಳ ಸಾರಿಗೆ ಖರ್ಚಿನಿಂದ ರಾಜ್ಯ ಸರ್ಕಾರಕ್ಕೆ 16 ಕೋಟಿ ರೂಪಾಯಿ ಹೊರೆಯಾಗಲಿದೆ.

ಗ್ಯಾರೆಂಟಿ ಜಾರಿಯೇ ಹೊರೆಯಾಗಿ ಅಭಿವೃದ್ಧಿಗೆ ಹಣ ಇಲ್ಲದಿರುವಾಗ ಕಂಡ ಕಂಡವರಿಗೆ ಗೂಟದ ಕಾರು ಕೊಡಲು ರಾಜ್ಯದ ಖಜಾನೆ ಏನು ಕಾಂಗ್ರೆಸ್ ಪಕ್ಷದ ಆಸ್ತಿ ಎಂದುಕೊಂಡಿದ್ದೀರಾ? ಸಚಿವರು, ಆಡಳಿತ ಯಂತ್ರದ ಮೂಲಕ ಗ್ಯಾರೆಂಟಿ ಜಾರಿ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಸುಮ್ಮನೆ ರಾಜ್ಯದ ಬೊಕ್ಕಸವನ್ನ ಪೋಲು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

RELATED ARTICLES

Related Articles

TRENDING ARTICLES