ಚಿಕ್ಕಮಗಳೂರು: ಕಾಂಗ್ರೆಸ್ಸಿನಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, “ಕಾಂಗ್ರೆಸ್‌ನವರು 30-35 ಜನಕ್ಕೂ ಡಿಸಿಎಂ ಸ್ಥಾನ ಕೊಟ್ಟು ಬಿಡಲಿ” ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್‌ನಲ್ಲಿ ಪ್ರತಿ ಜಾತಿಗೆ ಉಪಮುಖ್ಯಮಂತ್ರಿ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ನನ್ನ ಅಭಿಪ್ರಾಯದಲ್ಲಿ ಸುಮಾರು 30-35 ಜನರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಟ್ಟು ಬಿಡಲಿ. ಆಗ ಯಾವ ಸಮಸ್ಯೆಯೂ ಇರಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
“ಪ್ರತಿನಿತ್ಯ ಕೆಲವು ಸಚಿವರು, ಮುಖಂಡರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಜನರಿಗೆ ಇದು ಯಾವುದೂ ಅಗತ್ಯವಿಲ್ಲ. ಅಧಿಕಾರದಲ್ಲಿರುವ ಕಾಂಗ್ರೆಸ್ ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಾ ಇದೆ. ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೂ ಓರ್ವ ಅಧ್ಯಕ್ಷನಂತೆ, ಐವರು ಉಪಾಧ್ಯಕ್ಷರಂತೆ. ಇದೆಲ್ಲ ಬೇಕಾ” ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು, ಕೊಡಗು ಭಾಗದ ಕಾಫಿ ಬೆಳೆಗಾರರು ಅಕಾಲಿಕ ಮಳೆಯ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಗ್ಗೆ ಸಿಎಂ ಆಗಲೀ, ಡಿಸಿಎಂ ಆಗಲೀ, ಸಚಿವರಾಗಲೀ ಮಾತನಾಡುತ್ತಿದ್ದಾರಾ? ರೈತರ ಸಂಕಷ್ಟವನ್ನು ಕೇಳುತ್ತಿದ್ದಾರ? ಎಂದು ಕೇಳಿದ ಕುಮಾರಸ್ವಾಮಿ, ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ. ಕಾಂಗ್ರೆಸ್ನ ಸದ್ಯದ ಪರಿಸ್ಥಿತಿ ನನಗೆ ಅರ್ಥವಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.