ಬೆಂಗಳೂರು : ಅಲ್ಪಸಂಖ್ಯಾತ ಯುವತಿಗೆ ರಕ್ಷಣೆ ಕೊಡಲು ಈ ಸರ್ಕಾರಕ್ಕೆ ಆಗಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್ನ ದ್ವಿಮುಖ ನೀತಿ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಎಲ್ಲ ಆಯಾಮದಲ್ಲೂ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡುವಾಗ ಯುವಕ, ಯುವತಿ ಮೇಲೆ ದೌರ್ಜನ್ಯ ನಡೆದಿದೆ. ಆ ವೇಳೆ ಹಲ್ಲೆ ಮಾಡಿದ್ದಲ್ಲದೇ ಯುವತಿ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಬಗ್ಗೆ ಯುವತಿ ಆರೋಪಿಸಿದ್ದಾರೆ. ಪೊಲೀಸರು ಇಲ್ಲ ಅಂತ ಹೇಳ್ತಿದ್ದಾರೆ. ಪೊಲೀಸರು ಸತ್ಯ ಮುಚ್ಚಿಡ್ತಿದ್ದಾರೆ ಅನಿಸುತ್ತದೆ. ಪ್ರಕರಣದಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಿ, ಸೂಕ್ತ ಸೆಕ್ಷನ್ ಹಾಕಿ ತನಿಖೆ ಮಾಡಲಿ. ನೈತಿಕ ಪೊಲೀಸ್ ಗಿರಿ ಮಾಡಿದವರ ಮೇಲೆ ಕ್ರಮ ಆಗಲಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ ಮುಖ್ಯಮಂತ್ರಿನಾ?
ಮುಖ್ಯಮಂತ್ರಿಗಳ ಬಗ್ಗೆ ನಿರಾಶೆ ಆಗಿದೆ. ಇವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾ? ಅಥವಾ ಕಾಂಗ್ರೆಸ್ ಮುಖ್ಯಮಂತ್ರಿಗಳಾ? ಆಪಾದನೆ ಮಾಡಿದ್ರೆ ಬಡವರ ಕಲ್ಯಾಣ ಅಂತೀರಿ. ಗ್ಯಾರಂಟಿಗಳು ಸರಿಯಾಗಿ ಮುಟ್ಟುತ್ತಿವೆ ಅಂತ ನೋಡೊಕೆ ಸಮಿತಿ ಬೇಕಾ?ಗೃಹಲಕ್ಷ್ಮೀ ಯೋಜನೆ ಕೊಡಿಸ್ತೇವೆ ಅಂತ ಏಜೆಂಟ್ ಗಿರಿ ಮಾಡ್ತಿದಾರೆ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.