Friday, January 24, 2025

ಬಿಜೆಪಿ ನಾಯಕರು ಸ್ವಯಂ ಕ್ವಾರಂಟೈನ್​ಗೆ ಒಳಪಡಲಿ : ಕಾಂಗ್ರೆಸ್

ಬೆಂಗಳೂರು : ರಾಜ್ಯಪಾಲರನ್ನು ನಿನ್ನೆಯಷ್ಟೇ ಭೇಟಿಯಾಗಿದ್ದ ಬಿಜೆಪಿ ನಾಯಕರು ಕೊವಿಡ್ ನಿಯಮಗಳನ್ನು ಅನುಸರಿಸಿ, ಸ್ವಯಂ ಕ್ವಾರಂಟೈನ್​ಗೆ ಒಳಪಡಬೇಕು ಎಂದು ಕಾಂಗ್ರೆಸ್​ ಕುಟುಕಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್​, ಬಿಜೆಪಿ ನಾಯಕರು ರಾಜ್ಯದ ಜನರ ಆರೋಗ್ಯದ ಬಗ್ಗೆ ಕಾಳಜಿ ಪ್ರದರ್ಶಿಸಲಿ ಎಂದು ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ ಫೋಟೋ ಹಂಚಿಕೊಂಡು ಚಾಟಿ ಬೀಸಿದೆ.

ಕೊರೋನಾ ಸೋಂಕು ದೃಢವಾಗಿರುವ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇವೆ ಎಂದು ಕಾಂಗ್ರೆಸ್​ ಪೋಸ್ಟ್​ ಮಾಡಿದೆ.

ರಾಜ್ಯಪಾಲರನ್ನು ಭೇಟಿ ಮಾಡಿದ್ದು ಇವರೇ

ಬಿಜೆಪಿ ನಾಯಕರು ನಿನ್ನೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಧೋರಣೆ ಹಾಗೂ ಬರ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯದ ಬಗ್ಗೆ ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದಗೌಡ, ಮಾಜಿ ಸಚಿವರು ಹಾಗೂ ಶಾಸಕರಾದ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ್, ಕೆ. ಗೋಪಾಲಯ್ಯ ಮತ್ತಿತರಿದ್ದರು.

ರಾಜ್ಯಪಾಲರ ಎಲ್ಲಾ ಕಾರ್ಯಕ್ರಮ ರದ್ದು

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರಿಗೆ ನಿನ್ನೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಸೋಂಕು ದೃಢಪಟ್ಟ ಕಾರಣ ಅವರು ರಾಜಭವನದಲ್ಲೇ ಕ್ವಾರಂಟೈನ್ ಅಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ.

RELATED ARTICLES

Related Articles

TRENDING ARTICLES