ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಐಸಿಸ್ ರೀತಿಯಲ್ಲಿ ಆಡಳಿತ ಮಾಡುತ್ತಿದೆ ಎಂಬ ಬಿಜೆಪಿಗರ ಆರೋಪಕ್ಕೆ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೊವಿಡ್ ಕಾಲದಲ್ಲಿ ಹಿಂದೂಗಳ ಶವ ಸಂಸ್ಕಾರ ಮಾಡಿದ್ದೇ ಮುಸ್ಲಿಮರು. ಆಗ ಹಿಂದೂವಾದಿಗಳು ಎಲ್ಲಿದ್ದರು? ಶ್ರೀಕಾಂತ್ ಪೂಜಾರಿ ಮಹಾನ್ ವ್ಯಕ್ತಿನಾ? ಆತನ ಪರ ಇವ್ರು ಹೋರಾಡ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಅರ್ಧಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದು ಮುಸ್ಲಿಮರು. ಬೇಕಿದ್ದರೆ ಈ ಬಗ್ಗೆ ಚರ್ಚೆಗೆ ಬರಲಿ. ಸಿದ್ದರಾಮಯ್ಯರಂತಹ ಶ್ರೇಷ್ಠ ಮುಖ್ಯಮಂತ್ರಿ ಬಗ್ಗೆ ಅವಹೇಳನ ಮಾಡ್ತಾರೆ. ಅದಕ್ಕೆ ನಾವು ಕೇಸ್ ಮಾಡಿದ್ದೀವಿ. ಐಸಿಸ್ ಸ್ಟೇಟ್ ಅಂತಾರೆ, ಇವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.
ಹಿಂದೂ-ಮುಸ್ಲಿಮರ ಜಗಳ ಹಚ್ಚೋದೇ ಕೆಲಸ
ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಜಗಳ ಹಚ್ಚೋದೇ ಬಿಜೆಪಿ ಕೆಲಸ. ಲೋಕಸಭಾ ಚುನಾವಣೆ ಬಂದಿದೆ, ಅದಕ್ಕೆ ಹಿಂದೂ ಮುಸ್ಲಿಂ ಅಂತ ಇಶ್ಯೂ ಮಾಡ್ತಾರೆ. ಪ್ರಧಾನಿ ನರೇಂದ್ರ ಮೋದಿ ಬಿರಿಯಾನಿ ತಿನ್ನಲು ಪಾಕಿಸ್ತಾನಕ್ಕೆ ಹೋದವರು. ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಮನೆಗೆ ಬಿರಿಯಾನಿ ತಿನ್ನಲು ಹೋಗಿದ್ರಲ್ವಾ? ಅದಕ್ಕೇನು ಹೇಳ್ತಾರೆ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.